ಪಾಣಿಪತ್, ಹರಿಯಾಣ: ಸುಮಾರು ಒಂದೂವರೆ ವರ್ಷದ ಕಾಲ ಗಂಡನಿಂದ ಕಿರುಕುಳಕ್ಕೆ ಒಳಗಾಗಿ, ಬಲವಂತವಾಗಿ ಶೌಚಾಲಯದಲ್ಲಿ ಬಂಧಿಯಾಗಿದ್ದ ಮಹಿಳೆಯೋರ್ವಳನ್ನು ಜಿಲ್ಲಾಡಳಿತ ರಕ್ಷಿಸಿದ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆಯನ್ನು 15 ಅಥವಾ 20 ದಿನಗಳಿಗೆ ಕೆಲ ಸಮಯ ಮಾತ್ರ ಹೊರಗೆ ಬಿಡಲಾಗುತ್ತಿದ್ದು, ನಂತರ ಎಂದಿನಂತೆ ಮನೆಯ ಮೇಲಿನ ಸಣ್ಣ ಶೌಚಾಲಯದಲ್ಲಿ ಕೂಡಿ ಹಾಕಲಾಗುತ್ತಿತ್ತು ಹಾಗೂ ಆಕೆಗೆ ಸ್ವಲ್ಪ ಮಾತ್ರವೇ ಊಟ ನೀಡಲಾಗುತ್ತಿತ್ತು ಎಂದು ಮಹಿಳಾ ರಕ್ಷಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಆಕೆಯ ಪತಿಯನ್ನು ಈ ವೇಳೆ ವಿಚಾರಣೆ ನಡೆಸಿದಾಗ ಆಕೆಯ ಆರೋಗ್ಯ ಸರಿಯಿಲ್ಲ. ಬೇರೆ ಬೇರೆ ವೈದ್ಯರ ಬಳಿ ಚಿಕಿತ್ಸೆ ನೀಡಿದರೂ ಆಕೆ ಸರಿಹೋಗಲಿಲ್ಲ. ಮನೆಯಲ್ಲಿದ್ದಾಗ ಬೇಕಾದನ್ನು ತಿಂದು, ಮನೆಯಲ್ಲೇ ಗಲೀಜು ಮಾಡಿಕೊಳ್ಳುತ್ತಿದ್ದಳು ಎಂದು ಶೌಚಾಲಯದಲ್ಲಿ ಕೂಡಿಟ್ಟಿದ್ದನ್ನು ಸಮರ್ಥನೆ ಮಾಡಿಕೊಂಡಿದ್ದಾನೆ.
ಸ್ಥಳೀಯರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮಹಿಳೆಯನ್ನು ಆಕೆಯ ಪತಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆಗಾಗ ಆಕೆಯನ್ನು ಹೊಡೆಯುವುದು, ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುವುದು ಮಾಡುತ್ತಿರುತ್ತಾನೆ ಎಂದು ಮಾಹಿತಿ ನೀಡಿದ್ದಾರೆ.
ಸಂತ್ರಸ್ತ ಮಹಿಳೆಗೆ 15,13, ಹಾಗೂ 11 ವರ್ಷದ ಮೂವರು ಮಕ್ಕಳಿದ್ದು ಯಾರೂ ಕೂಡಾ ಸಹಾಯ ಮಾಡುವಷ್ಟು ಶಕ್ತರಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.