ಉಜ್ಜಯಿನಿ (ಮಧ್ಯಪ್ರದೇಶ) : ಆರು ವರ್ಷದ ಹಿಂದಿನ ಪ್ರಕರಣದ ವಿಚಾರಣೆಗೆ ಹಾಜರಾಗಲು ಬಿಹಾರ ಮೂಲದ ಆರೋಪಿಯೊಬ್ಬ ಮಧ್ಯಪ್ರದೇಶದ ಉಜ್ಜಯಿನಿಯ ನಜ್ಜಿರಿ ಪೊಲೀಸ್ ಠಾಣೆಗೆ 1,400 ಕಿಮೀ ಸೈಕಲ್ ಮೂಲಕ ಪ್ರಯಾಣಿಸಿ ಗಮನ ಸೆಳೆದಿದ್ದಾನೆ. ಈತನ ಪ್ರಯಾಣದ ಕಥೆ ಕೇಳಿ ಪೊಲೀಸರೇ ಬೆರಗಾಗಿದ್ದಾರೆ.
ಮುಕೇಶ್ ಲೋಹರ್ ಎಂಬಾತ ಸೈಕಲ್ ಮೂಲಕ ಪ್ರಯಾಣಿಸಿ ಉಜ್ಜಯಿನಿ ತಲುಪಿದ ಆರೋಪಿಯಾಗಿದ್ದಾನೆ. ಕಾನೂನಿನ ಮೇಲೆ ಈತ ಇಟ್ಟಿರುವ ಗೌರವವನ್ನು ನೋಡಿ, ಠಾಣೆಗೆ ತಲುಪುತ್ತಿದ್ದಂತೆ ಪೊಲೀಸರು ಹೂಮಾಲೆ ಹಾಕಿ ಸ್ವಾಗತಿಸಿದ್ದಾರೆ.
ಮೂಲತಃ ಉಜ್ಜಯಿನಿ ನಿವಾಸಿಯಾಗಿರುವ ಮುಖೇಶ್ ಕುಮಾರ್, ವಿವಾಹವಾದ ಬಳಿಕ ಬಿಹಾರದಲ್ಲಿ ನೆಲೆಸಿದ್ದಾನೆ. ಆರು ವರ್ಷಗಳ ಹಿಂದೆ ಉಜ್ಜಯಿನಿಯ ನಜ್ಜಿರಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಆರೋಪಿ ಮುಖೇಶ್ ಕುಮಾರ್ಗೆ ವಾರೆಂಟ್ ನೀಡಿದ್ದರು. ಬಿಹಾರದಿಂದ ಉಜ್ಜಯಿನಿಗೆ ತಲುಪಲು ಸರಿಯಾದ ವ್ಯವಸ್ಥೆ ಇಲ್ಲದ ಹಿನ್ನೆಲೆ, ಮುಖೇಶ್ ತನ್ನ ಸೈಕಲ್ನಲ್ಲೇ 1,400 ಕಿ.ಮೀ ಕ್ರಮಿಸಿದ ಉಜ್ಜಯಿನಿ ತಲುಪಿದ್ದಾನೆ.
ಬಿಹಾರದ ಸೀತಾಮರ್ಹಿಯಿಂದ ಪ್ರಯಾಣ ಪ್ರಾರಂಭಿಸಿದ ಮುಖೇಶ್ ಕುಮಾರ್, ಹತ್ತು ದಿನಗಳ ಕಾಲ ಸೈಕಲ್ ತುಳಿದು ಉಜ್ಜಯಿನಿಯ ನಜ್ಜಿರಿ ಪೊಲೀಸ್ ಠಾಣೆ ತಲುಪಿದ್ದಾನೆ. ಬೇರೆ ವಾಹನದಲ್ಲಿ ಪ್ರಯಾಣಿಸಲು ಮುಖೇಶ್ ಆರ್ಥಿಕವಾಗಿ ಸಬಲನಾಗಿರಲಿಲ್ಲ. ಆದರೆ, ಕಾನೂನು ಪಾಲಿಸಬೇಕಾಗಿತ್ತು. ಹೀಗಾಗಿ, ಸೈಕಲ್ ಪ್ರಯಾಣ ಮಾಡಿದ್ದಾನೆ.