ನೆಲ್ಲೂರು(ಆಂಧ್ರ ಪ್ರದೇಶ): ಕೌಟುಂಬಿಕ ಸಮಸ್ಯೆಯಿಂದ ಪತ್ನಿಯೊಂದಿಗೆ ಕಿತ್ತಾಡುತ್ತಿದ್ದ ಗಂಡ, ಕೋಪದಿಂದ ಹೆಂಡತಿಗೆ ಕೋಲಿನಲ್ಲಿ ಹೊಡೆದು ಜೀವಂತವಾಗಿ ಸಮಾಧಿ ಮಾಡಿರುವ ಘಟನೆ ಜಿಲ್ಲೆಯ ಗೋಟ್ಲಪಲೆಂ ಗ್ರಾಮದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಪೊನ್ನುರು ಸುಭಾಶಿನಿ (37) ತನ್ನ ಮೂರನೇ ಪತಿ ಬುಡಬುಕ್ಕಲಾ ಸ್ವಾಮುಲು(30) ನೊಂದಿಗೆ ವಾಸಿಸುತ್ತಿದ್ದಳು. ಕಳೆದ 27ರಂದು ರಾತ್ರಿ ಮದ್ಯ ಸೇವಿಸಿದ್ದ ದಂಪತಿ, ಕೆಲ ಆಂತರಿಕ ವಿಚಾರವಾಗಿ ಪರಸ್ಪರ ಜಗಳವಾಡಿದ್ದರು. ಬಳಿಕ ಈ ವಿಚಾರವಾಗಿ ಕೋಪಗೊಂಡ ಪತಿ ಹೆಂಡತಿಯನ್ನು ಕೋಲಿನಿಂದ ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಸುಭಾಶಿನಿ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಿದ್ದಾಳೆ ಎಂದು ಕೊಡವಲೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಪ್ರತಾಪ್ ತಿಳಿಸಿದ್ದಾರೆ.
ಅದೇ ರಾತ್ರಿ ಸ್ವಾಮುಲು, ಹತ್ತಿರದಲ್ಲೇ ಗುಂಡಿಯೊಂದನ್ನು ತೋಡಿ, ಸುಭಾಶಿನಿಯನ್ನು ಜೀವಂತವಾಗಿಯೇ ಸಮಾಧಿ ಮಾಡಿದ್ದಾನೆ ಎಂದು ಸುಭಾಶಿನಿಯ ಏಳು ವರ್ಷದ ಮಗಳು ಪೊಲೀಸರಿಗೆ ತಿಳಿಸಿದ್ದಾಳೆ. ಅಲ್ಲದೆ ಬಳಿಕ ಬಾಲಕಿಯನ್ನು ಬೆದರಿಸಿ ಸ್ಥಳದಿಂದ ಓಡಿಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಡವಲೂರು ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ರಾವ್ ಸ್ಥಳಕ್ಕೆ ತೆರಳಿ ಶವವನ್ನು ಹೊರ ತೆಗೆದು ನೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸುಭಾಶಿನಿ ಯಾವಾಗ ಮತ್ತು ಹೇಗೆ ಸತ್ತಿದ್ದಾಳೆ ಎಂಬ ಸ್ಪಷ್ಟ ಮಾಹಿತಿ ಮರಣೋತ್ತರ ವರದಿಯ ನಂತರ ತಿಳಿಯುತ್ತದೆ ಎಂದು ಎಸ್‌ಐ ಪ್ರತಾಪ್ ತಿಳಿಸಿದ್ದಾರೆ.