ಪಶ್ಚಿಮಬಂಗಾಳ: ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರ ಮೇಲೆ ದಾಳಿ ನಡೆಯಬಹುದಾದ ಸಾಧ್ಯತೆಯನ್ನು ಮನಗಂಡು ಪಶ್ಚಿಮ ಬಂಗಾಳ ಸರ್ಕಾರವು ಝಡ್ ಪ್ಲಸ್ ಭದ್ರತೆ ನೀಡಲು ಮುಂದಾಗಿದೆ.
ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಿಶೋರ್ ಬಂಗಾಳ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಸೆಂಬ್ಲಿ ಚುನಾವಣೆಗೆ ವಿವರವಾದ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ ಏಪ್ರಿಲ್-ಮೇನಲ್ಲಿ ರಾಜ್ಯವ್ಯಾಪಿ ಪುರಸಭೆ ಚುನಾವಣೆಗೆ ಮೊದಲು ಮತ್ತು ನಂತರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಲು ಕಿಶೋರ್ ಉತ್ಸುಕರಾಗಿದ್ದಾರೆ. ಈ ವೇಳೆ ದಾಳಿ ನಡೆಯಬಹುದೆಂದು ಗುಪ್ತಚರ ವರದಿಗಳು ಹೇಳಿದ್ದವು.
ರಾಜ್ಯದಲ್ಲಿ ಜೆಡ್ ವರ್ಗದ ಭದ್ರತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಪೈಲಟ್ ಮತ್ತು ಬೆಂಗಾವಲು ವಾಹನಗಳನ್ನು ನೀಡಲಾಗುತ್ತದೆ. ಅಲ್ಲದೇ ಅವರಿಗೆ ರಾಜ್ಯ ಪೊಲೀಸ್ ಶ್ರೇಣಿಯ 12-16 ಭದ್ರತಾ ಸಿಬ್ಬಂದಿ ತಂಡವನ್ನು ಹೊರತುಪಡಿಸಿ ಕೆಲವೊಂದು ಕಮಾಂಡೋಗಳ ರಕ್ಷಣೆಯಿರುತ್ತದೆ.
ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 42 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನಗಳನ್ನು ಪಡೆದಿತ್ತು. ನಂತರ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ತನ್ನ ಚುನಾವಣಾ ಭವಿಷ್ಯವನ್ನು ಹೆಚ್ಚಿಸಲು ಕಿಶೋರ್ ಬಳಿ ತೆರಳಿತ್ತು.
ಇಲ್ಲಿಯವರೆಗೆ ಮಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಸೋದರಳಿಯ ಹಾಗೂ ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ರಾಜ್ಯದಲ್ಲಿ ಜ್ಹೆಡ್ ಪ್ಲಸ್ ಭದ್ರತೆ ಇ ತ್ತು.