ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಕೋಲ್ಕತ್ತಾ ಪೋರ್ಟ್ ಟ್ರಸ್ಟ್ನ 150 ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂದಿಲ್ಲ.
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ದೀದಿ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಮತ್ತು ಕೇಂದ್ರ ಸಚಿವ ಮನ್ಸುಖ್ ಮಂಡವಿಯಾ ಅವರೊಂದಿಗೆ ಬ್ಯಾನರ್ಜಿಯವರ ಹೆಸರನ್ನು ಕೂಡಾ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು.
ಈಗಾಗಲೇ ಮೋದಿ, ಕೋಲ್ಕತ್ತಾ ಬಂದರನ್ನು ಶ್ಯಾಮ ಪ್ರಸಾದ್ ಮುಖರ್ಜಿ ಬಂದರು ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ. ಹೌರಾ ಸೇತುವೆಯಲ್ಲಿ ನಿರ್ಮಿಸಲಾದ ಕ್ರಿಯಾತ್ಮಕ ವಾಸ್ತುಶಿಲ್ಪದ ಅನಾವರಣ ಕಾರ್ಯಕ್ರಮಕ್ಕೆ ಹಾಜರಾದ ಬಳಿಕ ಮಾತನಾಡಿದ್ದ ಬ್ಯಾನರ್ಜಿ, ಕೆಲ ಸಾಂವಿಧಾನಿಕ ಕಟ್ಟುಪಾಡುಗಳಿಂದಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ ಎಂದು ಹೇಳಿದ್ದರು. ಪ್ರಧಾನಿ ಮೋದಿ ಪೋರ್ಟ್ ಟ್ರಸ್ಟ್ನ 150ನೇ ವಾರ್ಷಿಕೋತ್ಸವದ ನಿಮಿತ್ತ ಹೌರಾ ಸೇತುವೆಯಲ್ಲಿ ಧ್ವನಿ ಮತ್ತು ಬೆಳಕಿನ ನೂತನ ವಿನ್ಯಾಸವನ್ನು ಉದ್ಘಾಟಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿದ್ದ ಮೋದಿ ಹಾಗೂ ಬ್ಯಾನರ್ಜಿ, ಮಾತುಕತೆ ನಡೆಸಿದ್ದರು. ಈ ವೇಳೆ ಸಿಎಎ ಹಾಗೂ ಎನ್ಆರ್ಸಿಯನ್ನು ಹಿಂತೆಗೆದುಕೊಳ್ಳುವಂತೆ ಮೋದಿಗೆ ದೀದಿ ಒತ್ತಾಯಿಸಿದ್ದರು.