ಮುಂಬೈ: ಮಲೆಗಾವ್ ಸ್ಫೋಟ ಪ್ರಕರಣ ಸಂಬಂಧ ಇಂದು ಮುಂಬೈ ಕೋರ್ಟ್ಗೆ ಹಾಜರಾಗಬೇಕಿದ್ದ ಭೋಪಾಲ್ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅನಾರೋಗ್ಯದ ಕಾರಣ ಒಂದು ದಿನದ ವಿನಾಯ್ತಿ ಪಡೆದಿದ್ದಾರೆ.
ಹೊಟ್ಟೆ ನೋವಿನ ಕಾರಣ ಆಸ್ಪತ್ರೆ ಸೇರಿದ್ದ ಪ್ರಗ್ಯಾ ಒಂದು ವಾರದವರೆಗೆ ವಿನಾಯ್ತಿ ನೀಡುವಂತೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಶೇಷ ಎನ್ಐಎ ಜಡ್ಜ್ ವಿ.ಎಸ್. ಪದಾಲ್ಕರ್ ಅವರು ನಾಳೆ ಹಾಜರಾಗಲೇಬೇಕೆಂದು ಸೂಚನೆ ನೀಡಿದ್ದಾರೆ. ಅಲ್ಲದೆ, ಮೆಡಿಕಲ್ ದಾಖಲೆಗಳನ್ನು ಸಲ್ಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಹೇಳಿದ್ದಾರೆ.
ಆರೋಗ್ಯದ ಸಮಸ್ಯೆಯೊಂದಿಗೆ ಸಂಸತ್ತಿನ ಪ್ರಕ್ರಿಯೆಗಳನ್ನು ಪೂರೈಸಬೇಕಿದೆ ಎಂದೂ ಪ್ರಗ್ಯಾ ಕಾರಣ ನೀಡಿದ್ದರು. ಆದರೆ ಈ ಹಂತದ ವಿಚಾರಣೆಯಲ್ಲಿ ನೀವು ಭಾಗವಹಿಸಲೇಬೇಕು ಎಂದು ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದೇ ಕಾರಣಕ್ಕೆ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ಪ್ರಗ್ಯಾ, ಇಂದು ಬೆಳಗ್ಗೆ ಮನೆಗೆ ತೆರಳಿದರು.
ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿರುವ ಏಳು ಆರೋಪಿಗಳಿಗೆ ವಾರದಲ್ಲಿ ಒಮ್ಮೆಯಾದರೂ ಕೋರ್ಟ್ಗೆ ಹಾಜರಾಗುವಂತೆ ಕಳೆದ ತಿಂಗಳು ಕೋರ್ಟ್ ಹೇಳಿತ್ತು.