ಹೈದರಾಬಾದ್: ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ಉಭಯ ದೇಶದ ಸೈನಿಕರ ನಡುವೆ ಸಂಘರ್ಷ ನಡೆದಿದ್ದು, ಇದರಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಇದರ ಬಳಿಕ ಎರಡು ದೇಶಗಳ ನಡುವೆ ಮೇಜರ್ ಜನರಲ್ ಮಟ್ಟದಲ್ಲಿ ಮಾತುಕತೆ ನಡೆದಿದ್ದು, ಈ ವೇಳೆ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಈಟಿವಿ ಭಾರತಗೆ ಲಭ್ಯವಾಗಿದೆ.
ಗಡಿಯಲ್ಲಿ ಶಾಂತಿ ಕಾಪಾಡಲು ಒಪ್ಪಿಗೆ:
ಕಳೆದ ಮೂರು ದಿನಗಳಿಂದ ಇನ್ಫ್ಯಾಂಟ್ರಿ ಡಿವಿಜನ್ ಕಮಾಂಡರ್ ಮೇಜರ್ ಜನರಲ್ ಅಭಿಜಿತ್ ಬಾಪಟ್ ಮತ್ತು ಪಿಎಲ್‌ಎನ ಅಧಿಕಾರಿ ನಡುವೆ ಗುರುವಾರ ಸಭೆ ನಡೆದಿತ್ತು. ಇಂದು ಬೆಳಗ್ಗೆ 10:30ಕ್ಕೆ ಆರಂಭವಾದ ಮೇಜರ್ ಜನರಲ್ ಮಟ್ಟದ ಸಭೆಯಲ್ಲಿ ಸಾಧ್ಯವಾದಷ್ಟು ಉದ್ವಿಗ್ನತೆ ತಿಳಿಗೊಳಿಸುವ ನಿಟ್ಟಿನಲ್ಲಿ ಹಾಗೂ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಕಾಯ್ದುಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿದು ಬಂದಿದೆ.
ವಿಭಾಗೀಯ ಕಮಾಂಡರ್ ಮಟ್ಟದಲ್ಲಿ ಮಾತುಕತೆ:
ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ಇಂದಿನವರೆಗೂ ಚೀನಾ ತನ್ನ ಸೇನೆಯನ್ನು ಹಿಂತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ. ಆದರೆ ಶಾಂತಿ ಕಾಪಾಡಿಕೊಳ್ಳಲು ಅದು ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಇಂದು ಕೂಡ ಸೋಮವಾರ ಘರ್ಷಣೆ ನಡೆದ ಸ್ಥಳದಲ್ಲಿಯೇ ಮಾತುಕತೆ ನಡೆದಿದೆ. ವಿಭಾಗೀಯ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆದಿದ್ದು, ಇದರಲ್ಲಿ ಹೆಚ್ಚಿನ ಮಿಲಿಟರಿ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ವರದಿಯಾಗಿದೆ.
ಕಮಾಂಡಿಂಗ್ ಆಫೀಸರ್ ಕರ್ನಲ್ ಬಿ ಸಂತೋಷ್ ಬಾಬು ಸೇರಿದಂತೆ 20 ಭಾರತೀಯ ಯೋಧರು ಘರ್ಷಣೆ ವೇಳೆ ಹುತಾತ್ಮರಾಗಿದರು. ಇದರ ಜತೆಗೆ ಅನೇಕ ಯೋಧರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಭಾರತ-ಚೀನಾ ನಡುವಿನ ಮೇಜರ್ ಜನರಲ್ ಮಟ್ಟದ ಮಾತುಕತೆ ಅಂತ್ಯವಾದ ಬಳಿಕ ಚೀನಾ ಭಾರತದ ನಾಲ್ವರು ಸೇನಾಧಿಕಾರಿ ಸೇರಿ 10 ಮಂದಿ ಯೋಧರನ್ನು ಬಿಡುಗಡೆಗೊಳಿಸಿದೆ ಎಂದು ಮಾಹಿತಿ ತಿಳಿದು ಬರುತ್ತಿದೆ.
ಇದೀಗ ಭಾರತ-ಚೀನಾ ಗಡಿ ಪ್ರದೇಶದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಮತ್ತು ಗಡಿಯುದ್ದಕ್ಕೂ ಚೀನಾ ನಡೆಸುವ ಚಟುವಟಿಕೆಗಳ ಮೇಲೆ ನಮ್ಮ ಯೋಧರು ನಿಗಾ ವಹಿಸುವಂತೆ ಕೇಂದ್ರ ಸರ್ಕಾರ ಹೇಳಿದೆ. ಅರುಣಾಚಲ ಪ್ರದೇಶ, ಭಾರತ-ನೇಪಾಳ ಗಡಿಯಲ್ಲೂ ಕೆಲವೊಂದು ಚಟುವಟಿಕೆ ನಡೆಯುತ್ತಿದ್ದು, ಅದರ ಮೇಲೆ ಹದ್ದಿನ ಕಣ್ಣಿಡುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
- ಸಂಜೀಬ್ ಕೆ.ಆರ್ ಬರುವಾ (ನವದೆಹಲಿ)