ನವದೆಹಲಿ: ಮೋಹನದಾಸ ಕರಮಚಂದ ಗಾಂಧಿ... ಶಾಲಾ ದಿನಗಳಲ್ಲಿ ಅವರೊಬ್ಬ ಸಾಧಾರಣ ವಿದ್ಯಾರ್ಥಿ. ಹೀಗಿದ್ದ ಅವರು ಬೌದ್ಧಿಕ ಜ್ಞಾನವುಳ್ಳ ಉತ್ತಮ ಸಂವಹನಕಾರರಾಗಿ ಬೆಳೆಯಲು ಸಾಕಷ್ಟು ಶ್ರಮವಹಿಸಿದ್ದಾರೆ.
ಲಂಡನ್ನಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಗಾಂಧೀಜಿ, ಭಾರತದ ಆಹಾರ ಪದ್ಧತಿ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಬರಹಗಳನ್ನು ಪ್ರಕಟಿಸುತ್ತಿದ್ದರು. ಆ ಬರಹಗಳ ಮೂಲಕ ಗಾಂಧೀಜಿ ಅವರು ಸರಳ ಭಾಷೆ ಮೂಲಕ ಜನರನ್ನ ಶಿಕ್ಷಿತರಾನ್ನಾಗಿಸುವ ಕಲೆಯನ್ನ ಕರಗತ ಮಾಡಿಕೊಂಡಿದ್ದರು. ಅಲ್ಲಿಂದ ಮುಂದೆ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. ಅಲ್ಲಿ ಅವರು ಹಲವು ಅವಮಾನಗಳನ್ನ ಎದುರಿಸಬೇಕಾಯಿತು. ಈ ಅವಮಾನಗಳ ಪೆಟ್ಟುಗಳನ್ನ ತಿಂದು ಗಟ್ಟಿಯಾದ ಕರಮಚಂದ್ ಗಾಂಧಿ, ತಮಗಾದ ಅವಮಾನಗಳನ್ನ ತಮ್ಮ ಬರಹಗಳ ಮೂಲಕವೇ ವ್ಯಕ್ತಪಡಿಸಿ ಹೋರಾಟದ ರೂಪುರೇಷೆಗೆ ಭದ್ರ ಬುನಾದಿ ಹಾಕಿದ್ದರು.
1893ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ಗಾಂಧೀಜಿ, ಅಲ್ಲಿನ ಹಾಗೂ ಭಾರತೀಯ ಪತ್ರಿಕೆಗಳ ಸಂಪಾದಕರಿಗೆ ಪತ್ರ ಬರೆಯುತ್ತಿದ್ದರು. ಆ ಸಂದರ್ಭದಲ್ಲಿ ಪತ್ರಕರ್ತರಿಗೆ ಇರಬೇಕಾದ ಗುಣಗಳನ್ನು ಮೈಗೂಡಿಸಿಕೊಂಡು ಬರಹಗಳ ಮೂಲಕವೇ ಭಾರತೀಯರ ಹಕ್ಕುಗಳಿಗಾಗಿ ಹೋರಾಡಿದ್ದರು ಮೋಹನದಾಸ ಕರಮಚಂದ್ ಗಾಂಧಿ.
ನೆಲ್ಸನ್ ಮಂಡೇಲಾ ಸೇರಿದಂತೆ ಹಲವರು ಗಾಂಧೀಜಿಯವರ ಅಹಿಂಸಾ ತತ್ವದ ಪ್ರೇರಣೆಗೆ ಒಳಗಾಗಿದ್ದರು. ವರ್ಣಬೇಧ ನೀತಿಯನ್ನು ನೆಲ್ಸನ್ ಮಂಡೇಲಾ ವಿರೋಧಿಸಿದ್ದೇ ಇದಕ್ಕೆ ಸಾಕ್ಷಿ. ಗಾಂಧೀಜಿಯವರ ಅಹಿಂಸಾ ತತ್ವವನ್ನು ಅವರು ಸಂಪೂರ್ಣವಾಗಿ ಗ್ರಹಿಸಿದ್ದರು.
ಆದರೆ, ಗಾಂಧೀಜಿ ಪತ್ರಿಕೆ ಹೇಗಿರಬೇಕು, ಬರಹ ಹೇಗಿರಬೇಕು ಎಂಬ ಬಗ್ಗೆ ಮಾದರಿಯಾಗಿದ್ದರು. ಫಾದರ್ ಆಫ್ ನೇಷನ್ ಕೇವಲ ರಾಜಕಾರಣಿಯಾಗಿ ಮಾತ್ರವಲ್ಲದೇ, ಪತ್ರಕರ್ತರಾಗಿಯೂ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. 1903ರಿಂದ 1948ರಲ್ಲಿ ಅವರ ಹತ್ಯೆಯಾಗುವವರೆಗೂ ಸುಮಾರು 300 ಮಿಲಿಯನ್ ಜನರ ಆಸೆ-ಆಕಾಂಕ್ಷೆಗಳನ್ನು ಹೊತ್ತುಕೊಂಡಿದ್ದರು. ಅದಕ್ಕಾಗಿ ಅವರು ಶ್ರಮಿಸಿದ್ದರು.
ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಗಾಂಧೀಜಿ ಅವರ ಪತ್ರಿಕಾ ಮೌಲ್ಯಗಳನ್ನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಹಾಗೂ ಅಗ್ನಿ ಪರೀಕ್ಷೆ ಎದುರಿಸಬೇಕಾಗಿದೆ. ಅವರ ಸಂದೇಶಗಳನ್ನು ನಾವು ಗ್ರಹಿಸಿ ಅವುಗಳನ್ನ ಅಳವಡಿಸಿಕೊಂಡು ಮುನ್ನಡೆಯಬೇಕಿದೆ. ಇದುವೇ ಅವರ 150ನೇ ಜನ್ಮದಿನಾಚರಣೆಗೆ ನಾವು ನೀಡುವ ಗೌರವವಾಗಿದೆ.
-ಚಂದ್ರಕಾಂತ್ ನಾಯ್ಡು