ನಾಗಪುರ (ಮಹಾರಾಷ್ಟ್ರ): ಕೊರೊನಾ ವೈರಸ್ನಿಂದ ಹೆಚ್ಚುತ್ತಿರುವ ಅಪಾಯಗಳನ್ನು ನಿಭಾಯಿಸಲು ರಾಜ್ಯದಲ್ಲೇ ಅತಿ ದೊಡ್ಡ 5,000 ಹಾಸಿಗೆಗಳ ಸಾಮರ್ಥ್ಯದ 'ಕೋವಿಡ್ ಕೇರ್ ಸೆಂಟರ್' ಅನ್ನು ನಾಗಪುರದಲ್ಲಿ ಸ್ಥಾಪಿಸಲಾಗುತ್ತಿದೆ.
ಈಗಾಗಲೇ, 500 ಹಾಸಿಗೆಗಳು ಕೇಂದ್ರದಲ್ಲಿ ಬಳಕೆಗೆ ಲಭ್ಯವಿದೆ. ಇದನ್ನು ಎಂಟು ದಿನಗಳ ದಾಖಲೆಯ ಸಮಯದಲ್ಲಿ ಸ್ಥಾಪಿಸಲಾಗಿದೆ.

ನಾಗಪುರ ಮಹಾನಗರ ಪಾಲಿಕೆ, ಯೆರ್ಲಾ ಬಳಿಯ ರಾಧಾ ಸ್ವಾಮಿ ಸತ್ಸಂಗ್ ಆವರಣದಲ್ಲಿ ಮೆಗಾ ಕೇಂದ್ರವನ್ನು ಸ್ಥಾಪಿಸುತ್ತಿದೆ. ಸಾಂಕ್ರಾಮಿಕ ರೋಗದ ಮಧ್ಯೆ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿ, ಟ್ರಸ್ಟ್ ಸಹಾಯಹಸ್ತ ಚಾಚಿದ್ದು, ಕೇಂದ್ರ ಸ್ಥಾಪನೆಗೆ ತನ್ನ ಆವರಣವನ್ನು ನೀಡಿದೆ.
ನಾವು ಈಗಾಗಲೇ 500 ಹಾಸಿಗೆಗಳ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಹೆಚ್ಚುವರಿ 2,500 ಹಾಸಿಗೆಗಳನ್ನು ಒದಗಿಸಿದ್ದೇವೆ ಮತ್ತು ಅಗತ್ಯವಿದ್ದಲ್ಲಿ ಅದನ್ನು 5,000 ಹಾಸಿಗೆಗಳವರೆಗೆ ಹೆಚ್ಚಿಸಬಹುದು ಎಂದು ಎನ್‌ಎಂಸಿ ಆಯುಕ್ತ ತುಕಾರಾಮ ಮುಂಡೆ ಹೇಳಿದರು.
ರೋಗಿಗಳನ್ನು ಸ್ಕ್ರೀನಿಂಗ್, ಕ್ವಾರಂಟೈನ್ ಮತ್ತು ಐಸೋಲೇಷನ್ಗಾಗಿ ನಿಗಮವು ಸೌಲಭ್ಯಗಳನ್ನು ಒದಗಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ರಾಜ್ಯದ ಅತಿದೊಡ್ಡ 'ಕೋವಿಡ್ ಕೇರ್ ಸೆಂಟರ್' ಆಗಿದೆ ಎಂದರು.

ಸ್ತ್ರೀ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಹಾಸಿಗೆಗಳು ಮತ್ತು ಶೌಚಾಲಯಗಳನ್ನು ಹೊಂದಿದೆ. ಪ್ರತಿಯೊಂದು ಹಾಸಿಗೆಯನ್ನು ಎಣಿಸಲಾಗಿದೆ ಮತ್ತು ರೋಗಿಯ ಸಂಖ್ಯೆಯಂತೆಯೇ ಇರುತ್ತದೆ. ಪ್ರತಿ 100 ಹಾಸಿಗೆಗಳಿಗೆ 20 ವೈದ್ಯರು, ವೈದ್ಯಕೀಯ ತಂಡ ಮತ್ತು ಇತರ ಸಿಬ್ಬಂದಿಗಳ ತಂಡ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಪ್ರತ್ಯೇಕ ರೋಗಿಗಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ವ್ಯವಸ್ಥೆಗಳನ್ನು ಇಲ್ಲಿ ಮಾಡಲಾಗಿದೆ. ಅವರ ತಾಪಮಾನ ಪರೀಕ್ಷೆಗಳು, ರಕ್ತ ಪರೀಕ್ಷೆಗಳನ್ನು ಸಹ ಇಲ್ಲಿ ಮಾಡಬಹುದು. ನಗರದಲ್ಲಿ ಪ್ರಸ್ತುತ ಧನಾತ್ಮಕ ರೋಗಿಗಳ ಸಂಖ್ಯೆ 300 ಕ್ಕಿಂತ ಕಡಿಮೆಯಿರುವುದರಿಂದ ಹೊಸ ಸೌಲಭ್ಯ ತಕ್ಷಣ ಅಗತ್ಯವಿಲ್ಲ ಎಂದು ಮುಂಡೆ ಹೇಳಿದರು.