ನಾಗ್ಪುರ (ಮಹಾರಾಷ್ಟ್ರ): ಸಾಮಾನ್ಯ ಅವಧಿಗೆ ಮುನ್ನವೇ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಮಿಡತೆಗಳು, ಹಲವು ರಾಜ್ಯದ ರೈತರಲ್ಲಿ ಆತಂಕ ಸೃಷ್ಟಿಸಿದ್ದಲ್ಲದೆ ಕರ್ನಾಟಕಕ್ಕೂ ಭೀತಿ ಶುರುವಾಗಿದೆ.
ಸಾಮಾನ್ಯವಾಗಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಮಿಡತೆಗಳು ಈಗಾಗಲೇ ದೇಶಕ್ಕೆ ಆಗಮಿಸಿದ್ದು, ಹಲವು ರಾಜ್ಯಗಳ ರೈತರ ಜಮೀನಿನ ಮೇಲೆ ದಾಳಿ ನಡೆಸಿವೆ. ಮಹಾರಾಷ್ಟ್ರದ ನಾಗ್ಪುರ ಮತ್ತು ವಾರ್ಧಾ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಿಡತೆಗಳ ಹಿಂಡು ಕಿತ್ತಳೆ ಮತ್ತು ತರಕಾರಿ ಬೆಳೆ ಹಾನಿ ಮಾಡಿವೆ ಎಂದು ಕೃಷಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
17 ಕಿಲೋ ಮೀಟರ್ ಉದ್ದ ಮತ್ತು 2ರಿಂದ 2.5 ಕಿ.ಮೀ. ಅಗಲದಷ್ಟು ವ್ಯಾಪ್ತಿಯಲ್ಲಿ ಮಿಡತೆಗಳ ಹಿಂಡು ನಾಗ್ಪುರ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ದಾಳಿ ನಡೆಸಿದ್ದು, ಕಿತ್ತಳೆ ಬೆಳೆಯನ್ನು ನಾಶ ಮಾಡಿವೆ.
ಅತ್ತ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮಿಡತೆಗಳು ದಾಳಿ ನಡೆಸಿವೆ. ಈ ಬಗ್ಗೆ ಮಾತನಾಡಿರುವ ಕೃಷಿ ಅಧಿಕಾರಿ, ಇಲ್ಲಿಯವರೆಗೆ 40 ಲಕ್ಷಕ್ಕೂ ಹೆಚ್ಚಿನ ಮಿಡತೆಗಳನ್ನು ಕೊಲ್ಲಲಾಗಿದೆ ಎಂದು ತಿಳಿಸಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ರಾಜ್ಯಗಳ ರೈತರ ಜಮೀನಿಗೆ ದಾಳಿ ಮಾಡುತ್ತಿದ್ದ ಮಿಡತೆಗಳು ಮಹಾರಾಷ್ಟ್ರಕ್ಕೂ ಆಗಮಿಸಿವೆ. ಇತ್ತ ತೆಲಂಗಾಣಕ್ಕೂ ಮಿಡತೆಗಳು ದಾಳಿ ನಡೆಸುವ ಸಂಭವ ಇದೆ ಎಂದು ಸರ್ಕಾರ ಕೆಲ ಜಿಲ್ಲೆಗಳ ರೈತರಿಗೆ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರದವರೆಗೂ ಮಿಡತೆಗಳು ಆಗಮಿಸಿರುವುದು ರಾಜ್ಯದ ಗಡಿ ಜಿಲ್ಲೆಗಳಿಗೂ ಭೀತಿ ಶುರುವಾಗಿದೆ. ಈಗಾಗಲೇ ಕೊರೊನಾ ಸೋಂಕಿನಿಂದ ಘೋಷಿಸಿರುವ ಲಾಕ್ಡೌನಿಂದ ರೈತರು ಕಂಗಾಲಾಗಿದ್ದು, ಮಿಡತೆಗಳು ಮತ್ತಷ್ಟು ಆತಂಕ ಹೆಚ್ಚಿಸಿವೆ.