ಮುಂಬೈ : ಆಡಳಿತಾರೂಢ ಬಿಜೆಪಿ ಮತ್ತು ಶಿವಸೇನೆ ಅಧಿಕಾರ ಹಂಚಿಕೆ, ಸರ್ಕಾರ ರಚನೆ ಜಟಾಪಟಿ ಮುಂದುವರೆದಿದೆ. ಈ ಹಿನ್ನೆಯಲ್ಲಿ ಎರಡೂ ಸರ್ಕಾರಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವವರೆಗೆ ನನ್ನನ್ನು ಮುಖ್ಯಮಂತ್ರಿಯಾಗಿ ನೇಮಿಸಿ ಎಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ರೈತನೊಬ್ಬ ಮನವಿ ಮಾಡುವ ಮೂಲಕ ಹುಬ್ಬೇರುವಂತೆ ಮಾಡಿದ್ದಾನೆ
ಕೇಜ್ ತಾಲೂಕಿನ ವಡ್ಮೌಲಿ ನಿವಾಸಿ ಶ್ರೀಕಾಂತ್ ವಿಷ್ಣು ಗಡಲೆ ಎಂಬ ರೈತ ನಿನ್ನೆ ಬೀಡ್ ಜಿಲ್ಲೆಯ ಡಿಸಿ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾನೆ.
2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಮುಖ್ಯಮಂತ್ರಿ ಗಾದಿಗೆ ಸಂಬಂಧಿಸಿದಂತೆ ಶಿವಸೇನೆ ಮತ್ತು ಬಿಜೆಪಿ ಜಟಾಪಟಿ ನಡೆಸಿವೆ. ಇದರಿಂದ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಳಂಭವಾಗುತ್ತಿದೆ. ಇದರಿಂದ ಬೇಸತ್ತ ಮಹಾರಾಷ್ಟ್ರದ ರೈತ ಶ್ರೀಕಾಂತ್ ವಿಷ್ಣು ಗಡಲೆ ಎಂಬುವವರು ರಾಜ್ಯಪಾಲರಿಗೆ ಪತ್ರ ಬರೆದು ವಿನಂತಿ ಮಾಡಿಕೊಂಡಿದ್ದಾರೆ.
ನೈಸರ್ಗಿಕ ವಿಪತ್ತುಗಳು (ಅಕಾಲಿಕ ಮಳೆ) ರಾಜ್ಯದಲ್ಲಿ ಕೊಯ್ಲಿಗೆ ಸಿದ್ಧವಾದ ಬೆಳೆಗಳಿಗೆ ಅಡ್ಡಿಯಾಗಿದೆ. ಈ ವಿಪತ್ತುಗಳ ಬಗ್ಗೆ ರೈತರು ಉದ್ವಿಗ್ನರಾಗಿದ್ದಾರೆ. ರೈತರು ಬಳಲುತ್ತಿರುವ ಸಮಯದಲ್ಲಿ, ಮುಖ್ಯಮಂತ್ರಿ ಹುದ್ದೆಯ ಸಮಸ್ಯೆಯನ್ನು ಬಹೆಹರಿಸಲು ಶಿವಸೇನೆ ಮತ್ತು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಸಮಸ್ಯೆ ಬಗೆಹರಿಯುವವರೆಗೆ, ರಾಜ್ಯಪಾಲರು ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ನನಗೆ ಹಸ್ತಾಂತರಿಸಬೇಕು ಎಂದು ಗಡಾಲೆ ಮನವಿ ಮಾಡಿದ್ದಾರೆ. ನಾನು ಸಿಎಂ ಆಗಿ ರೈತರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ನೀಡುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.