ಮುಂಬೈ: ಬಹಳಷ್ಟು ರಾಜಕೀಯ ಹೈಡ್ರಾಮಾದ ಬಳಿಕ ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷವು ಎನ್ಸಿಪಿ+ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದು, ನವೆಂಬರ್ 28ರಂದು ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪದಗ್ರಹಣ ಮಾಡಿದ್ದರು. ಇದೀಗ ವಾರಗಳ ಬಳಿಕ ಖಾತೆ ಹಂಚಿಕೆ ಫೈನಲ್ ಆಗಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜತೆಗೆ ಆರು ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಇದೀಗ ಯಾವುದೇ ರೀತಿಯ ಗೊಂದಲ ಉದ್ಭವವಾಗಬಾರದು ಎಂಬ ಉದ್ದೇಶದಿಂದ ಸಮನಾಗಿ ಖಾತೆ ಹಂಚಿಕೆ ಮಾಡಲಾಗಿದೆ. ಗೃಹ ಸಚಿವವಾಗಿ ಶಿವಸೇನೆಯ ಏಕನಾಥ ಶಿಂಧೆ ಕೆಲಸ ಮಾಡಲಿದ್ದು, ನಗರಾಭಿವೃದ್ಧಿ, ಪರಿಸರ ಸಂರಕ್ಷಣೆ, ಲೋಕೋಪಯೋಗಿ, ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಸಂಸದೀಯ ವ್ಯವಹಾರ ಖಾತೆ ಅವರ ಬಳಿ ಉಳಿದುಕೊಂಡಿವೆ.
ಮರಾಠರ ನಾಡಿನಲ್ಲಿ 'ಉದ್ಧವ್' ಸರ್ಕಾರ... ಶಿವಾಜಿ, ಈಶ್ವರನ ಹೆಸರಿನಲ್ಲಿ ಠಾಕ್ರೆ ಪ್ರಮಾಣ ವಚನ!
ಶಿವಸೇನೆಯ ಮತ್ತೊಬ್ಬ ಸಚಿವ ಸುಭಾಶ್ ದೇಸಾಯಿ ಅವರಿಗೆ ಕೈಗಾರಿಕೋದ್ಯಮ, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ, ಕ್ರೀಡಾ ಮತ್ತು ಯುವಜನ, ಉದ್ಯೋಗ ಖಾತೆಗಳನ್ನು ನೀಡಲಾಗಿದೆ. ಎನ್‌ಸಿಪಿಯ ಸಚಿವ ಚಗ್ಗನ್ ಬುಜಬಲ ಅವರಿಗೆ ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ, ಜಲ ಸಂಪನ್ಮೂಲ, ಅಬಕಾರಿ ಖಾತೆ ನೀಡಲಾಗಿದ್ದು, ಎನ್‌ಸಿಪಿಯ ಇನ್ನೊಬ್ಬ ಸಚಿವ ಜಯಂತ್ ಪಾಟೀಲ್ ಅವರಿಗೆ ಹಣಕಾಸು ಮತ್ತು ಯೋಜನೆ, ವಸತಿ, ಆಹಾರ ಸರಬರಾಜು ಮತ್ತು ಕಾರ್ಮಿಕ ಖಾತೆಗಳನ್ನು ನೀಡಲಾಗಿದೆ.
ಕಾಂಗ್ರೆಸ್ನ ಬಾಳಾಸಾಹೇಬ್ ತಾರೋಟ್ ಅವರಿಗೆ, ಕಂದಾಯ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ, ಪಶುಸಂಗೋಪನೆ, ಮೀನುಗಾರಿಕೆ ಖಾತೆಗಳನ್ನು ನೀಡಲಾಗಿದೆ. ಇದರ ಜತೆಗೆ ಮತ್ತೊಬ್ಬ ಕಾಂಗ್ರೆಸ್ ಸಚಿವ ನಿತಿನ್ ರಾವತ್ ಅವರಿಗೆ, ಬುಡಕಟ್ಟು ಜನಾಂಗ ಅಭಿವೃದ್ಧಿ, ಹಿಂದುಳಿದ ವರ್ಗ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನೀಡಲಾಗಿದೆ.