ಮುಂಬೈ (ಮಹಾರಾಷ್ಟ್ರ): ರಾಜ್ಯ ಬಿಜೆಪಿಯ ಹಿರಿಯ ನಾಯಕ ಏಕನಾಥ್ ಖಡ್ಸೆ ಪಕ್ಷಕ್ಕೆ ರಾಜೀನಾಮೆ ನೀಡಿ ಎನ್ಸಿಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮಹಾರಾಷ್ಟ್ರದ ಎನ್ಸಿಪಿ ಮುಖಂಡ ಹಾಗೂ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಘೋಷಿಸಿದ್ದಾರೆ.
ಮೂಲಗಳ ಪ್ರಕಾರ, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಅಧಿಕೃತವಾಗಿ ಎನ್ಸಿಪಿಗೆ ಸೇರ್ಪಡೆಯಾಗಲಿದ್ದು, ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳಲಿದೆ. ಏಕನಾಥ್ ಖಡ್ಸೆ ಅವರ ಈ ನಿರ್ಧಾರದಿಂದ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.
ಕೆಲವು ದಿನಗಳಿಂದ ಏಕನಾಥ್ ಖಡ್ಸೆ ಎನ್ಸಿಪಿ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್, ಈ ವಿಚಾರವನ್ನು ತಳ್ಳಿಹಾಕಿದ್ದರು.
ಏಕನಾಥ್ ಖಡ್ಸೆ ರಾಜೀನಾಮೆ ಅಂಗೀಕಾರ
ಏಕನಾಥ್ ಖಡ್ಸೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಿರುವುದಾಗಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಇದರ ಜೊತೆಗೆ ಏಕನಾಥ್ ಖಡ್ಸೆ ಬಿಜೆಪಿ ಸೇರಲಿದ್ದು, ಅಭಿನಂದನೆಗಳನ್ನು ತಿಳಿಸಿದ್ದಾರೆ.
'ದೇವೇಂದ್ರ ಫಡ್ನವೀಸ್ ನನ್ನ ಜೀವನ ನಾಶ ಮಾಡಿದ್ರು'
ಇನ್ನು ಇದೇ ವೇಳೆ ತಮ್ಮ ಅಸಮಾಧಾನ ಹೊರ ಹಾಕಿರುವ ಖಡ್ಸೆ,' ದೇವೇಂದ್ರ ಫಡ್ನವೀಸ್ ನನ್ನ ಜೀವನವನ್ನು ನಾಶ ಮಾಡಿದ್ದಾರೆ. ನಾಲ್ಕು ವರ್ಷಗಳನ್ನು ನಾನು ಮಾನಸಿಕ ಒತ್ತಡದಿಂದ ಕಳೆಯಬೇಕಾಯ್ತು. ನಾನು ಪಕ್ಷದಿಂದ ಹೊರಹೋಗಲು ನೀವು ಬಲವಂತ ಮಾಡುತ್ತಿದ್ದೀರಿ ಎಂದು ನಾನು ಪದೇ ಪದೆ ಹೇಳುತ್ತಿದ್ದೆ. ಬಿಜೆಪಿ ಪಕ್ಷ ಬಿಡುವುದಕ್ಕೆ ನನಗೆ ನೋವಿದೆ. ಆದ್ರೆ, ನನಗೆ ಬೇರೆ ದಾರಿ ಕಾಣುತ್ತಿಲ್ಲ. ನನ್ನನ್ನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲು ತೆರೆಮರೆಯ ಪ್ರಯತ್ನಗಳು ನಡೆಯುತ್ತಿವೆ' ಎಂದು ಅವರು ಹೇಳಿದ್ದಾರೆ.