ನಾಗ್ಪುರ: ಕಳೆದ ವರ್ಷ ಡಿಸೆಂಬರ್‌ನಲ್ಲಿ 32 ವರ್ಷದ ವ್ಯಕ್ತಿಯನ್ನು ಕೊಂದು, ಈ ಅಪರಾಧ ಮುಚ್ಚಿಡಲು ಶವವನ್ನು ಸುಟ್ಟ ಆರೋಪದ ಮೇಲೆ ಮೂವರನ್ನು ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಜಯ್ ದೇವ್‌ಗನ್ ಅಭಿನಯದ 2015 ರ 'ದೃಶ್ಯಂ' ಚಿತ್ರದಿಂದ ಆರೋಪಿ ಸ್ಫೂರ್ತಿಯಾಗಿದ್ದ ಎಂದು ಹೇಳಲಾಗುತ್ತಿದೆ. ಕೊಲೆಯಾದ ವ್ಯಕ್ತಿ ಪಂಕಜ್ ದಿಲೀಪ್ ಗಿರಾಮ್ಕರ್ ಹಲ್ದಿರಾಮ್ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಆತನನ್ನು ಕೊಲೆ ಮಾಡಿದ ಬಳಿಕ ಡಾಬಾ ಬಳಿ ಇದ್ದ ಆತನ ಮೋಟರ್ ಸೈಕಲ್ ಸೇರಿ ಆತನನ್ನು ಆರೋಪಿ ಸುಟ್ಟು ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.
ಮುಖ್ಯ ಆರೋಪಿ ಅಮರ್‌ಸಿಂಗ್ ಅಲಿಯಾಸ್ ಲಲ್ಲು ಜೋಗೇಂದ್ರಸಿಂಗ್ ಠಾಕೂರ್ (24) , ಗಿರಾಮ್ಕರ್ ಅವರ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ನಿಲೇಶ್ ಭರ್ನೆ ತಿಳಿಸಿದ್ದಾರೆ.
ಡಿಸೆಂಬರ್ 28 ರಂದು, ಗಿರಾಮ್ಕರ್ ತನ್ನ ಪತ್ನಿಯೊಂದಿಗೆ ವಾರ್ಧಾ ಜಿಲ್ಲೆಗೆ ಹೋಗುತ್ತಿದ್ದ. ಈ ವೇಳೆ ಠಾಕೂರ್ ಅಲ್ಲಿಗೆ ಬಂದಿದ್ದಾನೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಜೋಗೇಂದ್ರಸಿಂಗ್ ಗಿರಾಮ್ಕರ್ ತಲೆಗೆ ರಾಡ್ನಿಂದ ಹೊಡೆದಿದ್ದಾನೆ. ಆತ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಳಿಕ ಠಾಕೂರ್, ತನ್ನ ಉಪಾಹಾರ ಗೃಹದಲ್ಲಿ ಅಡುಗೆಯವ ಮತ್ತು ಇನ್ನೊಬ್ಬ ಸಹಾಯಕನ ಸಹಾಯದಿಂದ ದೇಹವನ್ನು ಡ್ರಮ್‌ನಲ್ಲಿ ಇರಿಸಿದ್ದಾನೆ. ಬಳಿಕ 10 ಅಡಿ ಆಳದ ಗುಂಡಿಯನ್ನು ತೆಗೆದು ಅದಕ್ಕೆ 50 ಕೆಜಿ ಉಪ್ಪು ಹಾಕಿ, ಆತನ ದೇಹವನ್ನು ಮಣ್ಣು ಮಾಡಿದ್ದಾನೆ. ಅಲ್ಲದೇ ಅದರ ಮೇಲ್ಗಡೆ ಗಿರಾಮ್ಕರ್ ಚಲಿಸುತ್ತಿದ್ದ ಮೋಟಾರ್ ಬೈಕ್ ಸುಟ್ಟು ಹಾಕಿದ್ದಾರೆ ಎಂದೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಹೇಳಾಗುತ್ತಿದೆ.
ಇಷ್ಟೆಲ್ಲ ಆದ ಬಳಿಕ ಆರೋಪಿ ತನ್ನ ಮೊಬೈಲ್ ಫೋನ್ನನ್ನು ರಾಜಾಸ್ಥಾನದ ಕಡೆ ಚಲಿಸುತ್ತಿದ್ದ ಟ್ರಕ್ ಮೇಲೆ ಎಸೆದಿದ್ದಾನೆ. ಗಿರಾಮ್ಕರ್ ಮನೆಗೆ ಬರದೇ ಇರುವುದನ್ನು ಗಮನಿಸಿದ ಮನೆಯವರು ಕಾಣೆಯಾಗಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ತನಿಖೆ ಮುಂದುವರೆಸಿರುವ ಪೊಲೀಸರು ಠಾಕೂರ್, ಅವರ ಅಡುಗೆಯವ ಮನೋಜ್ ಅಲಿಯಾಸ್ ಮುನ್ನಾ ರಾಂಪ್ರವೇಶ್ ತಿವಾರಿ (37) ಮತ್ತು ಇನ್ನೊಬ್ಬ ಸಹವರ್ತಿ ಶುಭಮ್ ಅಲಿಯಾಸ್ ತುಷಾರ್ ರಾಕೇಶ್ ಡೊಂಗ್ರೆ (28) ಅವರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ನಿಲೇಶ್ ಭರ್ನೆ ಹೇಳಿದ್ದಾರೆ.
ನಂತರ ದೇಹವನ್ನು ಹೂಳಿದ್ದ ಜಾಗವನ್ನು ಅಗೆದು, ಅವಶೇಷಗಳು ಮತ್ತು ಆತನ ಮೋಟಾರ್ಸೈಕಲ್ನನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ), 201 (ಅಪರಾಧದ ಪುರಾವೆಗಳು ಕಣ್ಮರೆಯಾಗಲು ಕಾರಣವಾಗುತ್ತವೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.