ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ಹತ್ತು ದಿನಗಳೇ ಕಳೆದಿದ್ದರೂ ಸರ್ಕಾರ ರಚನೆಯಾಗಿಲ್ಲ.
ಮೈತ್ರಿ ಪಕ್ಷಗಳಾದ ಬಿಜೆಪಿ-ಶಿವಸೇನೆ ನಡುವೆ ಅಧಿಕಾರದ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು, ಹೀಗಾಗಿ ಸರ್ಕಾರ ರಚನೆ ಮುಂದೂಡುತ್ತಲೇ ಬಂದಿದೆ.
ಸಿಎಂ ಆಗಿ ಕಳೆದ ಐದು ವರ್ಷ ಹುದ್ದೆ ನಿಭಾಯಿಸಿದ್ದ ದೇವೇಂದ್ರ ಫಡ್ನವೀಸ್ ಸರ್ಕಾರ ರಚನೆ ಸಂಬಂಧ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲಿದ್ದಾರೆ. ಆದರೆ ಈ ಭೇಟಿ ಮಳೆ ಭಾದಿತ ಮಹಾರಾಷ್ಟ್ರಕ್ಕೆ ಕೇಂದ್ರದ ನೆರವು ಕೇಳುವ ವಿಚಾರವಾಗಿದೆ ಎಂದೂ ಹೇಳಲಾಗಿದೆ.
'ಸೇನೆ'ಯಿಂದ ರಾಜ್ಯಪಾಲರ ಭೇಟಿ:
ಇತ್ತ ಬಿಜೆಪಿ ಮೈತ್ರಿಪಕ್ಷ ಶಿವಸೇನೆ ಇಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಯವರನ್ನು ಭೇಟಿ ಮಾಡಲಿದೆ.
ಶಿವಸೇನೆ ನಾಯಕ ಸಂಜಯ್ ರೌತ್ ನೇತೃತ್ವದ ನಿಯೋಗ ರಾಜ್ಯಪಾಲರ ಭೇಟಿ ಮಾಡಲಿದ್ದು, ಸರ್ಕಾರ ರಚನೆ ಬಗ್ಗೆ ಮಾತುಕತೆ ನಡೆಸಲಿದೆ.
ಶಿವಸೇನೆ 56 ಕ್ಷೇತ್ರಗಳಲ್ಲಿ ಗೆದ್ದಿದ್ದು, ಸರ್ಕಾರ ರಚನೆಗೆ 145 ಶಾಸಕರ ಬೆಂಬಲ ಅಗತ್ಯವಿದೆ. ಬಿಜೆಪಿ ಹೊರತಾಗಿ ಸರ್ಕಾರ ರಚಿಸಲು ಶಿವಸೇನೆ ಆಲೋಚನೆ ಮಾಡಿದರೂ ದೊಡ್ಡ ಸವಾಲೇ ಮುಂದಿದೆ.