ಮುಂಬೈ: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾದ್ ಪಟ್ಟಣದ ಬಳಿ ಬಸ್ವೊಂದು ನದಿಗೆ ಉರುಳಿ ಬಿದ್ದಿದೆ. ಪರಿಣಾಮ ಐವರು ಮೃತಪಟ್ಟು, ಎಂಟು ಜನ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕರಾದ್ ಪಟ್ಟಣದ ಬಳಿ ವೇಗವಾಗಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್, ಸೇತುವೆಯಿಂದ ನದಿಗೆ ಉರುಳಿ ಬಿದ್ದಿದೆ. ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ಖಚಿತಪಡಿಸಿದ್ದಾರೆ.
ಬಸ್ ಗೋವಾಕ್ಕೆ ತೆರಳುತ್ತಿತ್ತು. ಪುಣೆ-ಬೆಂಗಳೂರು ಹೆದ್ದಾರಿಯ ಇದಾಗಿದ್ದು, ಇಂದು ಬೆಳಗ್ಗೆ 4.30-4.45ರ ಸುಮಾರಿಗೆ ಬಸ್ ನದಿಗೆ ಉರುಳಿ ಬಿದ್ದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಹಾಗೂ ಗಾಯಗೊಂಡ ಪ್ರಯಾಣಿರೆಲ್ಲರೂ ನವೀ ಮುಂಬೈ ನಿವಾಸಿಗಳೆಂದು ತಿಳಿದು ಬಂದಿದೆ. ಬಸ್ 40 ಅಡಿ ಮೇಲಿಂದ ಉರುಳಿ ಬಿದ್ದಿದೆ.
ಮೃತರನ್ನು ಉಷಾ ನಾಯರ್ (40), ಮಧುಸೂದನ್ ನಾಯರ್ (42), ಆದಿತ್ಯ ನಾಯರ್ (23), ಸಜನ್ ನಾಯರ್ (35) ಮತ್ತು ಆರವ್ ನಾಯರ್ (3) ಎಂದು ಗುರುತಿಸಲಾಗಿದೆ. ಚಾಲಕ ಸೇರಿದಂತೆ ಗಾಯಾಳುಗಳು ಕರಾದ್ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳ ಅಡಿಯಲ್ಲಿ ಮತ್ತು ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಅಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಲ್ಲಿನ ಅಧಿಕಾರಿ ತಿಳಿಸಿದ್ದಾರೆ.