ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಪ್ರತ್ಯೇಕವಾಗಿ ಇರಿಸಿದ್ದ 125 ಕೊರೊನಾ ಶಂಕಿತರನ್ನು ಪರೀಕ್ಷೆಗೆ ಒಳಪಡಿಸಿದ್ದು, 121 ಜನರ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಕಂಡು ಬಂದಿದೆ. ಇನ್ನುಳಿದ ನಾಲ್ವರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈವರೆಗೆ 61,939 ಪ್ರಯಾಣಿಕರಿಗೆ ಸೋಂಕು ತಪಾಸಣೆ ನಡೆಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಅಲ್ಲದೇ ಚೀನಾ, ಹಾಂಗ್ ಕಾಂಗ್, ಥೈಲ್ಯಾಂಡ್, ಸಿಂಗಪುರ್, ದಕ್ಷಿಣ ಕೊರಿಯಾ, ಜಪಾನ್, ನೇಪಾಳ, ಇಂಡೋನೇಷ್ಯಾ, ವಿಯೆಟ್ನಾಂ, ಇಟಲಿ, ಇರಾನ್ ಮತ್ತು ಮಲೇಷ್ಯಾ ಹಾಗೂ ಕೊರೊನಾ ಪೀಡಿತ ಪ್ರದೇಶಗಳಿಂದ ಬರುವ ಪ್ರಯಾಣಿಕರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾಗುತ್ತಿದೆ.
ಕೋವಿಡ್ -19 ಪೀಡಿತ ಪ್ರದೇಶಗಳಿಂದ ಆಗಮಿಸಿದ 125 ಪ್ರಯಾಣಿಕರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಆದರೆ ಅವರಲ್ಲಿ 121 ಜನರಲ್ಲಿ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ವರದಿಗಳ ಪ್ರಕಾರ ಯಾವುದೇ ವೈರಸ್ ಸೋಂಕು ಪತ್ತೆಯಾಗಿಲ್ಲ ಎನ್‌ಐವಿ ತಿಳಿಸಿದೆ.
ಮಾರಣಾಂತಿಕ ಸೋಂಕಿಗೆ ತುತ್ತಾಗಿರಬಹುದೆಂದು ಶಂಕಿಸಲಾಗಿರುವವರನ್ನು ಚಿಕಿತ್ಸೆಗಾಗಿ ಪ್ರತ್ಯೇಕ ಕೊಠಡಿಗಳಿಗೆ ಕಳುಹಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕಿನ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ಎನ್‌ಐವಿ ಮಾಹಿತಿ ನೀಡಿದೆ.
ಪ್ರಸ್ತುತ ಮುಂಬೈನಲ್ಲಿ ಐದು ಮಂದಿ, ಪುಣೆ ಮತ್ತು ನಾಸಿಕ್ನಲ್ಲಿ ತಲಾ ಒಬ್ಬರನ್ನು ಪ್ರತ್ಯೇಕವಾಗಿರಿಸಲಾಗಿದೆ. ಅಲ್ಲದೇ ಈ ನಾಲ್ಕು ಪ್ರಯಾಣಿಕರ ಸ್ವ್ಯಾಬ್ ಮಾದರಿಗಳ ವರದಿಗಳನ್ನು ಎನ್ಐವಿಯಿಂದ ಕಾಯಲಾಗುತ್ತಿದೆ ಎಂದು ಹೇಳಿದೆ.