ಭೋಪಾಲ್/ಇಂದೋರ್(ಮಧ್ಯಪ್ರದೇಶ): ತೀವ್ರ ಸ್ಪರ್ಧಾತ್ಮಕ ಕಣವಾಗಿದ್ದ ಮಧ್ಯಪ್ರದೇಶದ ಉಪಚುನಾವಣೆಯಲ್ಲಿ 19 ಸ್ಥಾನಗಳನ್ನು ಗೆದ್ದು ಬಿಜೆಪಿ ನಿರ್ಣಾಯಕ ಜಯ ದಾಖಲಿಸಿದೆ ಮತ್ತು ಕೇವಲ 9 ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.
ಕೇಂದ್ರ ಚುನಾವಣಾ ಆಯೋಗದ ಪ್ರಕಾರ, ಬಿಜೆಪಿ ಶೇ 49.5 ರಷ್ಟು ಮತಗಳನ್ನು ಗಳಿಸಿದ್ದು, ಕಾಂಗ್ರೆಸ್ 40.5 ರಷ್ಟು ಮತಗಳನ್ನು ಪಡೆದಿದೆ.
ಮಧ್ಯಪ್ರದೇಶದಲ್ಲಿ ನವೆಂಬರ್ 3 ರಂದು 28 ಸ್ಥಾನಗಳಿಗೆ ನಡೆದಿದ್ದ ಮತದಾನದ ಫಲಿತಾಂಶ ಮಂಗಳವಾರ ಪ್ರಕಟವಾಯಿತು. ರಾಜ್ಯದಲ್ಲಿ 25 ಶಾಸಕರು ರಾಜೀನಾಮೆ ನೀಡಿದ್ದರು ಮತ್ತು ಆ ಮೊದಲೇ ಮೂವರು ಶಾಸಕರು ಅಕಾಲಿಕವಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆ 28 ಸ್ಥಾನಗಳಿಗೆ ಉಪಚುನಾವಣೆ ನಡೆದಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಕಾಂಗ್ರೆಸ್ನ 22 ಶಾಸಕರು ರಾಜೀನಾಮೆ ನೀಡಿದ್ದರು. ಈ ಮೂಲಕ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಲು ದಾರಿ ಮಾಡಿಕೊಟ್ಟರು.
ಉಪಚುನಾವಣೆಯ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಇದು ಮಧ್ಯಪ್ರದೇಶದ ಜನರ ಗೆಲುವು ಎಂದು ಹೇಳಿದ್ದಾರೆ.