ರಾಯ್ಗಢ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ ಹಿನ್ನೆಲೆ ರಾಹುಲ್ ಗಾಂಧಿಯ ಪ್ರಧಾನಿ ಕನಸು ಕನಸಾಗೆ ಉಳಿಯಿತು. ಈ ಕಾರಣಕ್ಕಾಗಿ ಕೈ ಕಾರ್ಯಕರ್ತ ತಲೆ ಬೋಳಿಸಿಕೊಂಡಿದ್ದಾನೆ.
ಹೌದು, ಮಧ್ಯಪ್ರದೇಶದ ಹರಣದ ಕಾಂಗ್ರೆಸ್ ಕಾರ್ಯಕರ್ತ ಬಾಬು ಲಾಲ್ ಸೇನ್ ಎಂಬುವರು, ರಾಹುಲ್ ಗಾಂಧಿ ಪ್ರಧಾನಿ ಆಗದಿದ್ರೆ ನಾನು ತಲೆ ಬೋಳಿಸಿಕೊಳ್ತೀನಿ ಎಂದು ಬಿಜೆಪಿ ಕಾರ್ಯಕರ್ತ ರಾಮ್ ಬಾಬು ಮಂಡ್ಲೊಯಿಗೆ ಮಾತು ಕೊಟ್ಟಿದ್ದರು.ಅಂತೆಯೆ, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸದೆ, ಬಿಜೆಪಿ ಎದುರು ಸೋತಿದೆ. ಈ ಕಾರಣದಿಂದ ಬಾಬು ಲಾಲ್ ತನ್ನ ತಲೆ ಬೋಳಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಬಾಬು ಲಾಲ್, ಮೋದಿ ಮತ್ತೊಮ್ಮೆ ಪ್ರಧಾನಿಯಾಗದಿದ್ದರೆ ತಾನು ತಲೆ ಬೋಳಿಸಿಕೊಳ್ಳುವುದಾಗಿ ರಾಮ್ ಬಾಬು ಹೇಳಿದ್ದ. ಅಂತೆಯೆ, ರಾಹುಲ್ ಪ್ರಧಾನಿಯಾಗದಿದ್ರೆ ನಾನು ತಲೆ ಬೋಳಿಸಿಕೊಳ್ತೇನೆ ಎಂದಿದ್ದೆ. ಅದರಂತೆ, ನನ್ನ ಪಕ್ಷ ಚುನಾವಣೆಯಲ್ಲಿ ಸೋತು, ರಾಹುಲ್ ಪ್ರಧಾನಿಯಾಗಲಿಲ್ಲ. ಸವಾಲಿನಂತೆ ತಲೆ ಬೋಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೆ, ಪಂಚರಾಜ್ಯ ಚುನಾವಣೆ ವೇಳೆ ರಾಹುಲ್ ಭರವಸೆ ನೀಡಿದ್ದಂತೆ ಮಧ್ಯಪ್ರದೇಶದಲ್ಲಿ ರೈತರ ಸಾಲಮನ್ನಾ ಆಗಿಲ್ಲ. ಇನ್ನು ಮೂರು ತಿಂಗಳಲ್ಲಾದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜನರು ಆಕ್ರೋಶದಿಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ರಾಯ್ಗಢದಲ್ಲಿ ಇಂತಹ ಸವಾಲುಗಳು ಹೊಸದೇನಲ್ಲ. ಇಲ್ಲಿಯ ಕಾಂಗ್ರೆಸ್ ಕಾರ್ಯಕರ್ತ ಇಂದುಸಿಂಗ್ ಎಂಬುವರು ಇಂದಿರಾಗಾಂಧಿ ಹತ್ಯೆ ನಂತರ ಒಂದು ವರ್ಷ ಮೌನದಿಂದಿದ್ದರು. ಬಿಜೆಪಿ ಕಾರ್ಯಕರ್ತ ಜೋಶಿ ಡಿಗ್ಗಿ ಎಂಬುವರು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಚಪ್ಪಲಿ ಹಾಕುವುದನ್ನೇ ಬಿಟ್ಟಿದ್ದರು.