ಜೈಪುರ್: ಯುವತಿಯರ ಹುಚ್ಚು ಕಾರು ಚಾಲನೆಯಿಂದ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ನಗರದ ಎಲಿವೆಟೆಡ್ ರಸ್ತೆಯಲ್ಲಿ ನಡೆದಿದೆ.
ಮಾಹಿತಿಗಳ ಪ್ರಕಾರ, ರಾಜಸ್ಥಾನ ಪೊಲೀಸರು ಇಂದು ಕಾನ್ಸ್ಟೇಬಲ್ ಪರೀಕ್ಷೆ ಕೈಗೊಂಡಿದ್ದಾರೆ. ಪರೀಕ್ಷೆ ಬರೆಯಲು ಬಂದಿದ್ದ ಯುವಕ ಎಲಿವೆಟೆಡ್ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ, ಐಷಾರಾಮಿ ಆಡಿ ಕಾರಿನಲ್ಲಿ ಬಂದ ಯುವತಿಯರು ಯುವಕನಿಗೆ ಡಿಕ್ಕಿ ಹೊಡೆದಿದ್ದಾರೆ.
ಇನ್ನು ಡಿಕ್ಕಿ ರಭಸಕ್ಕೆ ಯುವಕ 30 ಅಡಿಗಳಷ್ಟು ಮೇಲಕ್ಕೆ ಹಾರಿ ರಸ್ತೆ ಪಕ್ಕದ ಅಂಗಡಿಯೊಂದರ ಮಾಳಿಗೆ ಮೇಲೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಅಪಘಾತದಲ್ಲಿ ಯುವಕನ ಕಾಲೊಂದು ತುಂಡಾಗಿ ಬೇರೆ ಸ್ಥಳದಲ್ಲಿ ಬಿದ್ದಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮೃತ ಯುವಕನ ಶವವನ್ನು ಎಸ್‌ಎಂಎಸ್ ಆಸ್ಪತ್ರೆಯ ಮೋರ್ಗ್‌ನಲ್ಲಿ ಇಡಲಾಗಿದ್ದು, ಅಪಘಾತದ ಬಗ್ಗೆ ಮೃತ ವ್ಯಕ್ತಿಯ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯ ಕುಟುಂಬ ಜೈಪುರ ತಲುಪಿದ ನಂತರವೇ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಮೃತರ ಕುಟುಂಬ ಎಫ್‌ಐಆರ್ ದಾಖಲಿಸಿದ ನಂತರ ಯುವತಿಯರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಆಡಿ ಕಾರು ಮತ್ತು ಯುವತಿಯರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.