ಲುಧಿಯಾನ (ಪಂಜಾಬ್ ) : ಸೋಮವಾರ ಪ್ರಕಟವಾದ ಸಿಬಿಎಸ್‌ಇ ಹನ್ನೆರಡನೇ ತರಗತಿಯ ಫಲಿತಾಂಶದಲ್ಲಿ ಲುಧಿಯಾನ ವಿದ್ಯಾರ್ಥಿನಿ ಗುರ್ವೀನ್ ಕೌರ್ ಶೇ. 99.8 ಅಂಕ ಗಳಿಸಿ ಪಂಜಾಬ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ. ವಕೀಲೆಯಾಗುವ ಬಯಕೆ ಹೊಂದಿರುವ ಗುರ್ವೀನ್ ಕೌರ್, ನಾಲ್ಕು ವಿಷಯಗಳಲ್ಲಿ 100 ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ್ದಾಳೆ.
"ನಾನು ಶೇಕಡಾ 99.8 ಅಂಕಗಳನ್ನು ಗಳಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ನನಗೆ ಇಂಗ್ಲಿಷ್, ರಾಜಕೀಯ ವಿಜ್ಞಾನ, ಭೂಗೋಳ ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ 100 ಅಂಕಗಳು ಮತ್ತು ಅರ್ಥಶಾಸ್ತ್ರದಲ್ಲಿ 99 ಅಂಕಗಳು ಬಂದಿವೆ. ನಾನು ವಕೀಲೆಯಾಗಲು ಬಯಸುತ್ತೇನೆ. ನನ್ನ ತಂದೆ ಕೂಡ ವಕೀಲರಾಗಿದ್ದಾರೆ. ನಾನು ಪಡೆದ ಅಂಕ ನನಗೆ ದೊಡ್ಡ ಗೆಲುವಾಗಿದೆ. ಇದಕ್ಕಾಗಿ ಹೆತ್ತವರಿಗೆ ಮತ್ತು ವಹೇಗೂರುಜಿಗೆ ಧನ್ಯವಾದ ಹೇಳುತ್ತೇನೆ" ಎಂದು ಗುರ್ವೀನ್ ಕೌರ್ ಹೇಳಿದ್ದಾಳೆ.
ಶೇ. 99.2 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಗಳಿಸಿದ ಮತ್ತೊಬ್ಬ ವಿದ್ಯಾರ್ಥಿನಿ ಜಾಸ್ಮಿನ್ ಮಂಗತ್, ತಾನು ಐಎಎಸ್ ಅಧಿಕಾರಿಯಾಗಲು ಬಯಸುತ್ತೇನೆ ಎಂದು ಹೇಳಿದ್ದಾಳೆ. "ನಾನು ನಾಲ್ಕು ವಿಷಯಗಳಲ್ಲಿ 99 ಮತ್ತು ಒಂದರಲ್ಲಿ 100 ಅಂಕ ಗಳಿಸಿದ್ದೇನೆ. ನಾನು ಐಎಎಸ್ ಅಧಿಕಾರಿಯಾಗಲು ಬಯಸುತ್ತೇನೆ, ಆದ್ದರಿಂದ ಈ ಗುರಿಯನ್ನು ಸಾಧಿಸಲು ಯಾವ ರೀತಿ ಮುಂದುವರೆಯಬೇಕೆಂದು ಯೋಚಿಸುತ್ತಿದ್ದೇನೆ " ಎಂದು ಜಾಸ್ಮಿನ್ ಮಂಗತ್ ತಿಳಿಸಿದ್ದಾಳೆ.
ಇಬ್ಬರು ವಿದ್ಯಾರ್ಥಿಗಳು ಅಧ್ಯಯನ ಮಾಡಿದ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ರೇಷ್ಮಿ ಬಿಎಸ್ ಪ್ರತಿಕ್ರಿಯಿಸಿ, ಹನ್ನೆರಡನೇ ತರಗತಿಯ ಎಲ್ಲ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದರಿಂದ ತುಂಬಾ ಸಂತೋಷವಾಗಿದೆ. ಮಾನವಿಕ ವಿಭಾಗದಲ್ಲಿ ಶೇ. 99.8 ಮತ್ತು ಶೇ. 99.2 ಅಂಕ ಗಳಿಸಿ ಪ್ರಥಮ ಮತ್ತು ದ್ವಿತೀಯ ಸ್ಥಾನ ನಮ್ಮ ವಿದ್ಯಾರ್ಥಿಗಳು ಪಡೆದಿದ್ದಾರೆ. ಎಲ್ಲ ಮಕ್ಕಳು ಅದ್ಭುತ ಸಾಧನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಚಂಡೀಗಢದಲ್ಲಿ ಶೇ. 90.02 ರಷ್ಟು ಬಾಲಕರು ಮತ್ತು 94.39 ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಎರಡೂ ಪ್ರದೇಶಗಳಲ್ಲಿ, ಹುಡುಗಿಯರು ಹುಡುಗರಿಗಿಂತ ಉತ್ತಮ ಸಾಧನೆ ತೋರಿದ್ದಾರೆ. ಇನ್ನು ಮುಂದೆ ಫಲಿತಾಂಶ ಘೋಷಣೆಯ ವೇಳೆ ಫೇಲ್ ಎಂಬ ಪದ ಬಳಕೆ ಮಾಡುವುದಿಲ್ಲ.ಈ ಕುರಿತು ಅಭ್ಯರ್ಥಿಗಳಿಗೆ ದಾಖಲೆ ನೀಡುವಾಗ ತಿಳಿಸಲಾಗುತ್ತದೆ ಎಂದು ಸಿಬಿಎಸ್‌ಇ ತಿಳಿಸಿದೆ.