ಲೂಧಿಯಾನಾ(ಪಂಜಾಬ್): ಇಲ್ಲಿನ ಗುರು ಅಂಗದ್ ದೇವ್ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ ಶ್ವಾನಗಳಿಗಾಗಿ ವಿಶೇಷ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡಿದೆ. ಉತ್ತರ ಭಾರತದಲ್ಲಿ ಶ್ವಾನಗಳಿಗೆ ನಿರ್ಮಾಣಗೊಂಡಿರುವ ಮೊದಲ ಬ್ಲಡ್ ಬ್ಯಾಂಕ್ ಇದಾಗಿದೆ.
ನಾಯಿಗಳು ಬದುಕುಳಿಯುವ ಸಾಧ್ಯತೆ ಹೆಚ್ಚಿಸಲು ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಅನುಮೋದನೆ ಪಡೆದ ನಂತರ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಉತ್ತರ ಭಾರತದಲ್ಲಿನ ಮೊದಲ ಶ್ವಾನಗಳ ರಕ್ತ ಬ್ಯಾಂಕ್ ಇದಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಾ. ಶಿಕೃತಿ ಶರ್ಮಾ, ನಾವು ಪ್ರತಿ ವರ್ಷ ಕನಿಷ್ಠ 25 ಸಾವಿರ ಪ್ರಕರಣ ನಿರ್ವಹಿಸುತ್ತಿದ್ದು, ಅದರಲ್ಲಿ 500-600 ಶ್ವಾನ ಪ್ರಕರಣಗಳಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇರುವುದಾಗಿವೆ. ಇಂತಹ ಸಂದರ್ಭಗಳಲ್ಲಿ ನಾವು ರಕ್ತ ವರ್ಗಾವಣೆ ಮಾಡಬೇಕಾಗುತ್ತದೆ ಎಂದಿದ್ದಾರೆ.
ಶ್ವಾನಗಳಿಗಾಗಿ ಬ್ಲಡ್ ಬ್ಯಾಂಕ್ ಅನುಮೋದನೆಗಾಗಿ ಒಟ್ಟು 25 ವಿವಿಧ ರಾಜ್ಯಗಳು ಅರ್ಜಿ ಸಲ್ಲಿಕೆ ಮಾಡಿದ್ದವು. ಆದರೆ ಜೈವಿಕ ತಂತ್ರಜ್ಞಾನ ಕೇವಲ ಎರಡು ಬ್ಯಾಂಕ್ ಸ್ಥಾಪನೆ ಮಾಡಲು ಅವಕಾಶ ನೀಡಿದೆ. ಒಂದು ಚೆನ್ನೈನಲ್ಲಿ ಹಾಗೂ ಇನ್ನೊಂದು ನಮ್ಮಲ್ಲಿ ಎಂದು ತಿಳಿಸಿದ್ದಾರೆ.