ನವದೆಹಲಿ: 17ನೇ ಲೋಕಸಭೆಯ ಸರ್ಕಾರ ರಚನೆಯಾದ ಬಳಿಕ ಆರಂಭವಾಗಲಿರುವ ಲೋಕಸಭಾ ಸಭಾಪತಿ ಆಯ್ಕೆ ಪ್ರಕ್ರಿಯೆ ಈ ಬಾರಿ ತೀವ್ರ ಕುತೂಹಲ ಮೂಡಿಸಿದೆ.
ಸಂಸತ್ನ ಗೌರವಾನ್ವಿತ ಸ್ಥಾನವಾದ ಲೋಕಸಭಾ ಸಭಾಪತಿ ಸ್ಥಾನಕ್ಕೆ ಹಲವರ ಹೆಸರುಗಳು ಕೇಳಿ ಬರುತ್ತಿವೆ. ಇದರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆದ್ದಿರುವ ಪ್ರಹ್ಲಾದ್ ಜೋಶಿ ಕೂಡ ಸ್ಪೀಕರ್ ಹುದ್ದೆಯ ರೇಸ್‌ನಲ್ಲಿದ್ದಾರೆ.
ಒಂದ್ವೇಳೆ ಜೋಶಿ ಈ ಸ್ಥಾನಕ್ಕೆ ನೇಮಕವಾದರೆ, ಕರ್ನಾಟಕ ಮೂಲದ ಎರಡನೇ ಲೋಕಸಭಾ ಸಭಾಪತಿ ಎಂಬ ಹೆಗ್ಗಳಿಕೆ ಪಾತ್ರವಾಗಲಿದ್ದಾರೆ.
ಕರ್ನಾಟಕದ ಮೊದಲ ಲೋಕಸಭೆ ಸ್ಪೀಕರ್ ಯಾರು?
ಇದಕ್ಕೂ ಮೊದಲು 7ನೇ ಲೋಕಸಭಾ ಸ್ಪೀಕರ್ ಆಗಿ ಕೆ.ಎಸ್. ಹೆಗ್ಡೆ ಆಯ್ಕೆ ಆಗಿದ್ದರು. 1977ರ ಜುಲೈ 21ರಿಂದ 1980ರ ಜನವರಿ 21ರ ವರೆಗೆ ಅವರು ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೆ.ಎಸ್ ಹೆಗ್ಡೆ, ನಿವೃತ್ತ ಲೋಕಾಯುಕ್ತರೂ ಆದ ನ್ಯಾ. ಸಂತೋಷ್ ಹೆಗ್ಡೆ ಅವರ ತಂದೆ.
ಸ್ಪೀಕರ್ ರೇಸ್‌ನಲ್ಲಿ ಯಾರಿದ್ದಾರೆ?
ಉತ್ತರ ಪ್ರದೇಶದ ಬರೇಲಿ ಸಂಸತ್ ಕ್ಷೇತ್ರದಿಂದ 8 ಬಾರಿ ಗೆದ್ದಿರುವ ಬಿಜೆಪಿಯ ಹಿರಿಯ ಮುಖಂಡ ಸಂತೋಷ್ ಗಂಗಾವರ್ ಪ್ರಬಲ ಸ್ಪೀಕರ್ ಹುದ್ದೆಯ ಪ್ರಬಲ ಸ್ಪರ್ಧಿಯಾಗಿದ್ದಾರೆ. ಗಂಗಾವರ್ ಪಕ್ಷದ ಇತರೆ ಹಿಂದುಳಿದ ಜನಾಂಗದ ಪ್ರಮುಖ ನಾಯಕನಾಗಿ ಗುರುತಿಸಿಕೊಂಡವರು.
ಗಂಗಾವರ್ ಜೊತೆಗೆ ಪ್ರಹ್ಲಾದ್ ಪಟೇಲ್ ಮತ್ತು ನರೇಂದ್ರ ಸಿಂಗ್ ತೋಮರ್ ಪೈಪೋಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಕೊಟ್ಟ ಕರ್ನಾಟಕಕ್ಕೆ ಪ್ರತಿಯಾಗಿ ಸ್ಪೀಕರ್ ಸ್ಥಾನ ದೊರೆಯಬಹುದೆಂದು ರಾಜಕೀಯ ಪಂಡಿತರು ವಿಶ್ಲೇಷಣೆ ನಡೆಸುತ್ತಿದ್ದಾರೆ.