ನವದೆಹಲಿ: ಭಾರತ ಲಾಕ್‌ಡೌನ್ 4.0 ಅಂತ್ಯಕ್ಕೆ ಬಂದು ತಲುಪುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿನ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಎಲ್ಲ ಅಧಿಕಾರಿಗಳೊಂದಿಗೆ ತೀವ್ರ ಚರ್ಚೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ, ಭಾನುವಾರ ಕೊನೆಗೊಳ್ಳುವ ಲಾಕ್‌ಡೌನ್ ಅನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಲವು ತೋರಿವೆ ಎಂದು ತಿಳಿದು ಬಂದಿದೆ.
ಈಟಿವಿ ಭಾರತ ಜೊತೆ ಮಾತನಾಡಿದ ಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಪ್ರೊವೈಡರ್ಸ್ ಇಂಡಿಯಾದ ಮಹಾನಿರ್ದೇಶಕ ಡಾ.ಗಿರಿಧರ್ ಗಯಾನಿ, ಲಾಕ್‌ಡೌನ್ ಮುಂದುವರಿದರೆ ವಲಯವಾರು ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊಂದಿರಬೇಕು ಎಂದಿದ್ದಾರೆ. ಕೊರೊನಾ ಸೋಂಕಿಗೆ ಲಾಕ್‌ಡೌನ್ ದೀರ್ಘಾವಧಿ ಪರಿಹಾರವಲ್ಲ. ಸರ್ಕಾರವು ಆರ್ಥಿಕತೆ ಚೇತರಿಕೆ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಲಾಕ್‌ಡೌನ್ ಬಗ್ಗೆ ಸಿಎಂಗಳ ಅಭಿಪ್ರಾಯದ ಬಗ್ಗೆ ವಿವರಿಸಿದ್ದಾರೆ. ಲಾಕ್‌ಡೌನ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಭಾರತದಾದ್ಯಂತ ವಿವಿಧ ನಗರಗಳ ಸೋಂಕಿನ ಏರಿಕೆಯನ್ನು ಸರ್ಕಾರ ಪರಿಗಣಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿ ಗೌಬಾ ಅವರು ಗುರುವಾರ ಮುಖ್ಯ ಕಾರ್ಯದರ್ಶಿಗಳು, ಹೆಚ್ಚು ಕೋವಿಡ್-19 ಪ್ರಕರಣ ಹೊಂದಿರುವ ರಾಜ್ಯಗಳ ಆರೋಗ್ಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ್ದಾರೆ. ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ತೀವ್ರ ಕೋವಿಡ್-19 ಪೀಡಿತ 13 ನಗರಗಳ ಜಿಲ್ಲಾ ದಂಡಾಧಿಕಾರಿಗಳು ಮತ್ತು ಪುರಸಭೆ ಆಯುಕ್ತರು ಸಭೆಯಲ್ಲಿ ಉಪಸ್ಥಿತರಿದ್ದರು ಎಂಬುದು ಗಮನಿಸಬೇಕಾದ ಅಂಶವಾಗಿದೆ.
ದೇಶದಲ್ಲಿ ಪ್ರಸ್ತುತ 1,65,799 ಸೋಂಕಿತರಿದ್ದು, ಇದರಲ್ಲಿ 71105 ಜನ ಗುಣಮುಖರಾಗಿದ್ದರೆ ಇನ್ನೂ 89987 ಆ್ಯಕ್ಟಿವ್ ಕೇಸ್ಗಳಿವೆ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ 5.0 ಮುಂದುವರೆಯುತ್ತಾ ಎನ್ನುವ ಕುತೂಹಲ ದೇಶದ ಜನರಲ್ಲಿ ಮೂಡಿದೆ.