ನವದೆಹಲಿ: ದೇಶಾದ್ಯಂತ ಹೇರಿಕೆ ಮಾಡಲಾಗಿರುವ ಲಾಕ್ಡೌನ್ 3.0 ಮೇ 17ರವರೆಗೆ ಮುಂದುವರಿಯಲಿದ್ದು, ಮುಂದಿನ ಕಾರ್ಯತಂತ್ರ ಏನು ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಈ ವೇಳೆ ಎಲ್ಲ ಮುಖ್ಯಮಂತ್ರಿಗಳು ಮಹತ್ವದ ಮಾಹಿತಿ ನೀಡಿದ್ದು, ಕೆಲವೊಂದು ರಾಜ್ಯದ ಸಿಎಂಗಳು ಲಾಕ್ಡೌನ್ ಮುಂದುವರಿಕೆ ಮಾಡಲು ಅಸಾಧ್ಯ ಎಂದಿದ್ದು, ಕೆಲವೊಂದು ರಾಜ್ಯದಲ್ಲಿ ಕೇವಲ ರೆಡ್ ಝೋನ್ಗಳಲ್ಲಿ ಕರ್ಫ್ಯೂ ವಿಧಿಸುವಂತೆ ಮನವಿ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ದೇಶದಲ್ಲಿ ಮಾರ್ಚ್ 25ರಿಂದ ಲಾಕ್ಡೌನ್ ಜಾರಿಯಲ್ಲಿದ್ದು, ಈಗಾಗಲೇ ಒಂದೂವರೆ ತಿಂಗಳಾಗಿದೆ.
ಮೇ.15ರೊಳಗೆ ರಾಜ್ಯದ ಕಾರ್ಯತಂತ್ರಗಳ ಬಗ್ಗೆ ಸಲಹೆ ಹಂಚಿಕೊಳ್ಳುವಂತೆ ನಮೋ ಎಲ್ಲ ಸಿಎಂಗಳಿಗೆ ಮಾಹಿತಿ ನೀಡಿದ್ದು, ಆಯಾ ರಾಜ್ಯಗಳಲ್ಲಿ ಯಾವ ರೀತಿಯ ಸಡಿಲಿಕೆ ನೀಡಬಹುದು ಎಂಬುದರ ಕುರಿತು ಮಾಹಿತಿ ನೀಡಿ ಎಂದು ತಿಳಿಸಿರುವ ಜತೆಗೆ ಲಾಕ್ಡೌನ್ ಎಕ್ಸಿಟ್ ಕಾರ್ಯತಂತ್ರ ರೂಪಿಸಿ ಸಲಹೆ ಹಂಚಿಕೊಳ್ಳಲು ಅವರು ತಿಳಿಸಿದ್ದಾರೆ. ಇನ್ನು ಕೆಲವೊಂದು ರಾಜ್ಯಗಳು ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿ ಮಾಡಿಕೊಂಡಿವೆ.
ಇಂದಿನಿಂದ ದೇಶಾದ್ಯಂತ ಕೆಲವೊಂದು ಆಯ್ದ ನಗರಗಳಿಗೆ ಪ್ಯಾಸೆಂಜರ್ ರೈಲು ಕೂಡ ಆರಂಭಗೊಳ್ಳಲಿದ್ದು, ಇದರ ಮಧ್ಯೆ ಮುಂದಿನ ಹಂತದ ಬಗ್ಗೆ ಯಾವ ರೀತಿಯಾಗಿ ಇರಬೇಕು ಎಂಬುದರ ಕುರಿತು ಮುಂದಿನ ಎರಡು ದಿನದಲ್ಲಿ ಹೊಸ ಕಾರ್ಯಸೂಚಿ ಹೊರಬರುವ ಸಾಧ್ಯತೆ ಇದೆ.
ದೇಶದಲ್ಲಿ ಆರ್ಥಿಕ ಪುನಶ್ಚೇತನ, ಹಂತಹಂತವಾಗಿ ಪರಿಸ್ಥಿತಿ ಹತೋಟಿಗೆ ತರುವುದು ಹಾಗೂ ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸುವುದು ದೇಶದ ಮುಂದಿರುವ ದೊಡ್ಡ ಸವಾಲಾಗಿದ್ದು, ಅದಕ್ಕಾಗಿ ಮೇ.17ರ ನಂತರ ದೇಶದಲ್ಲಿ ಯಾವ ರೀತಿಯ ಕಾರ್ಯಸೂಚಿ ಇರಲಿದೆ ಎಂಬುದು ಮಹತ್ವ ಪಡೆದುಕೊಂಡಿದೆ.
ದೇಶದಲ್ಲಿ ಈಗಾಗಲೇ ಕೋವಿಡ್-19 ಸೋಂಕಿತರ ಸಂಖ್ಯೆ 70 ಸಾವಿರಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 2,294 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲೇ 3,616 ಹೊಸ ಕೇಸ್ ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 24,114 ಸೋಂಕಿತರಿದ್ದಾರೆ. ಇದರಲ್ಲಿ 885 ಜನರು ಸಾವನ್ನಪ್ಪಿದ್ದು, ತಮಿಳುನಾಡಿನಲ್ಲಿ 7873, ದೆಹಲಿಯಲ್ಲಿ 7592 ಸೋಂಕಿತರಿದ್ದಾರೆ.
ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಳಿಗೆ ತಲೆನೋವಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಕೂಡ ಗೊಂದಲಕ್ಕೀಡಾಗುವಂತೆ ಮಾಡಿದೆ.