ಕೇಂದ್ರ ಸರ್ಕಾರ ಮೂರನೇ ಬಾರಿಗೆ ಮತ್ತೆ ಎರಡು ವಾರ ಲಾಕ್ಡೌನ್ ವಿಸ್ತರಿಸಿದೆ. ಆದರೆ ಇದು ಮೊದಲಿನ ರೀತಿಯ ಸಂಪೂರ್ಣ ಲಾಕ್ಡೌನ್ ಅಲ್ಲ. ದೇಶಾದ್ಯಂತ ಇರುವ ಜಿಲ್ಲೆಗಳನ್ನು ಆಯಾ ಜಿಲ್ಲೆಯ ಕೊರೊನಾ ತೀವ್ರತೆಯನ್ನು ಆಧರಿಸಿ ಹಸಿರು, ಕಿತ್ತಳೆ ಹಾಗೂ ಕೆಂಪು ವಲಯಗಳಾಗಿ ವಿಂಗಡಿಸಲಾಗಿದೆ. ಈ ಮೂಲಕ ಹಂತ ಹಂತವಾಗಿ ಲಾಕ್ಡೌನ್ ನಿರ್ಬಂಧಗಳನ್ನು ತೆರವುಗೊಳಿಸಲು ಸರ್ಕಾರ ಯತ್ನಿಸುತ್ತಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಇದೇ ಮಾದರಿಯಲ್ಲಿ ತಮ್ಮ ಲಾಕ್ಡೌನ್ ಹಂತ ಹಂತವಾಗಿ ಸಡಿಲಿಸುತ್ತಿವೆ. ಕೋವಿಡ್ನಿಂದ ಅತಿ ಹೆಚ್ಚು ಸಾವು ಸಂಭವಿಸಿದ ವಿಶ್ವದ ನಗರಗಳಲ್ಲಿ ಕೂಡ ಈಗ ಲಾಕ್ಡೌನ್ ಸಡಿಲಿಸಲಾಗುತ್ತಿದೆ. ವಿಶ್ವದ ವಿವಿಧ ರಾಷ್ಟ್ರಗಳು ವಾಸ್ತವದಲ್ಲಿ ಹೇಗೆ ಲಾಕ್ಡೌನ್ ನಿಯಮಗಳನ್ನು ತೆರವುಗೊಳಿಸುತ್ತಿವೆ ಎಂಬುದನ್ನು ಅರಿತು, ಭಾರತವೂ ಸಾಕಷ್ಟು ಪಾಠಗಳನ್ನು ಕಲಿಯಬಹುದಾಗಿದೆ.
ಲಾಕ್ಡೌನ್ ತೆರವಿಗೆ ಕೈಗೊಳ್ಳಬೇಕಾದ 4 ಪ್ರಮುಖ ಕ್ರಮಗಳು
1. ಟೆಸ್ಟಿಂಗ್ (ಸೋಂಕು ಪರೀಕ್ಷೆ): ಹೆಚ್ಚು ಪ್ರಮಾಣದಲ್ಲಿ ಪರೀಕ್ಷೆಗಳನ್ನು ಕೈಗೊಳ್ಳುವ ಮೂಲಕ ಕೊರೊನಾ ವೈರಸ್ ವೇಗವಾಗಿ ಹರಡದಂತೆ ತಡೆಯಬಹುದು. ಸುಪ್ತವಾಗಿ ವೈರಸ್ ಹರಡುತ್ತಿರುವ ಪ್ರದೇಶಗಳನ್ನು ಪರೀಕ್ಷೆಯ ಮೂಲಕ ಕಂಡುಹಿಡಿಯಲು ಸಾಧ್ಯ. ಒಂದು ವೇಳೆ ಜಿಮ್, ರೆಸ್ಟೋರೆಂಟ್ ಮುಂತಾದುವುಗಳನ್ನು ಮೊದಲಿನ ರೀತಿಯಲ್ಲಿ ಆರಂಭಿಸಬೇಕಾದರೆ ಸೋಂಕು ಪತ್ತೆ ಪರೀಕ್ಷೆಗಳನ್ನು ಮೊದಲು ಮಾಡಬೇಕಾಗುತ್ತದೆ. ಅಮೆರಿಕದಲ್ಲಿ ಇದಕ್ಕಾಗಿ ಮೂರು ಪಟ್ಟು ಹೆಚ್ಚು ಪರೀಕ್ಷೆಗಳನ್ನು ಕೈಗೊಳ್ಳಲಾಯಿತು ಎಂಬುದು ಗಮನಾರ್ಹ.
2. ಟ್ರ್ಯಾಕಿಂಗ್ (ಪತ್ತೆ ಮಾಡುವಿಕೆ): ರೋಗಿಗಳನ್ನು ಪತ್ತೆ ಮಾಡುವುದು ಮತ್ತೊಂದು ಕಠಿಣ ಕೆಲಸವಾಗಿದೆ. ಸ್ಮಾರ್ಟ್ಫೋನ್ ಹಾಗೂ ಸರ್ಚ್ ಡೇಟಾ ಬಳಸಿ ರೋಗಿಗಳನ್ನು ಪತ್ತೆ ಮಾಡುವ ವಿಧಾನಗಳ ಕುರಿತು ಗೂಗಲ್ ಹಾಗೂ ಆ್ಯಪಲ್ ಸಂಶೋಧನೆಗಳನ್ನು ನಡೆಸಿವೆ.
3. ಲಸಿಕಾಕರಣ: ಎಲ್ಲರಿಗೂ ವೈರಸ್ ಸೋಂಕು ತಗುಲದಂತೆ ಮಾಡಲು ಲಸಿಕಾಕರಣ ಬಹಳ ಮುಖ್ಯ. ಆದರೆ ಕೊರೊನಾ ವೈರಸ್ಗೆ ವ್ಯಾಕ್ಸಿನ್ ಕಂಡುಹಿಡಿಯಲು ಸಂಶೋಧನೆಗಳು ಈಗಷ್ಟೇ ನಡೆದಿದ್ದು, ಪ್ರಾಥಮಿಕ ಹಂತದಲ್ಲಿವೆ. ಹರ್ಡ್ ಇಮ್ಯುನಿಟಿ ಬಂದಲ್ಲಿ ವೈರಸ್ ಹರಡುವುದು ಕಡಿಮೆಯಾಗುತ್ತದೆ ಎನ್ನಲಾಗಿದ್ದರೂ ಇದರ ಬಗ್ಗೆ ಇನ್ನೂ ಅಧ್ಯಯನಗಳು ನಡೆಯಬೇಕಿವೆ.
4. ಜೀವನ ಶೈಲಿ ಬದಲಾವಣೆ: ಯಾವಾಗಲೂ ಮಾಸ್ಕ್ ಹಾಕಿಕೊಂಡಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಇವೆಲ್ಲ ಹೊಸ ಬದಲಾವಣೆಗಳಾಗಲಿವೆ. ಬಸ್, ರೈಲು ಮುಂತಾದೆಡೆ ಜನಜಂಗುಳಿ ಇರದಂತೆ ನೋಡಿಕೊಳ್ಳುವುದು ಸಹ ಮುಖ್ಯ.
ಲಾಕ್ಡೌನ್ ತೆರೆಯುವ ಮುನ್ನ ಪರಿಗಣಿಸಬೇಕಾದ ಅಂಶಗಳು
- ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿರಬೇಕು.
- ಕೊರೊನಾ ಸೋಂಕಿತರನ್ನು ಪತ್ತೆ ಮಾಡಿ, ಪರೀಕ್ಷೆಗೊಳಪಡಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ದೇಶದ ಆರೋಗ್ಯ ವ್ಯವಸ್ಥೆ ಸಮರ್ಥವಾಗಿರಬೇಕು.
- ಶಾಲೆ ಕಾಲೇಜು ಹಾಗೂ ಕೆಲಸದ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿರಬೇಕು.
- ಸಮುದಾಯದ ಜನತೆ ಹೊಸ ಬದಲಾವಣೆಗೆಗಳಿಗೆ ಹೊಂದಿಕೊಳ್ಳಲು ತಯಾರಾಗಿರಬೇಕು.
- ವೈರಸ್ ಹರಡುವಿಕೆಯ ಕುರಿತು ಸತತವಾಗಿ ಮಾಹಿತಿ ನೀಡುತ್ತಿರಬೇಕು.
ವಿವಿಧ ದೇಶಗಳಲ್ಲಿ ಲಾಕ್ಡೌನ್ ಹೇಗೆ ತೆರವುಗೊಳಿಸಲಾಗುತ್ತಿದೆ?
ಕೆನಡಾ: ದೇಶದ ಎಲ್ಲ ಪ್ರಾಂತ್ಯಗಳು ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿವೆ. ಮೂರು ಹಂತಗಳಲ್ಲಿ ಲಾಕ್ಡೌನ್ ತೆರವು ಮಾಡಲಾಗುತ್ತಿದೆ.
ಅಮೆರಿಕ: ಇಲ್ಲಿ ಒಟ್ಟು 11 ಲಕ್ಷಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದೆ. ದೇಶದ 50 ರಲ್ಲಿ 27 ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಯಲ್ಲಿದೆ. ಉಳಿದ ರಾಜ್ಯಗಳಲ್ಲಿ ಲಾಕ್ಡೌನ್ ಸಡಿಲಗೊಳಿಸಲಾಗಿದ್ದು, ಹೊಟೇಲ್, ಅಂಗಡಿ, ಸಲೂನ್ ಮುಂತಾದುವುಗಳನ್ನು ತೆರೆಯಲಾಗುತ್ತಿದೆ.
ಸ್ಪೇನ್: 2.4 ಲಕ್ಷಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸುಮಾರು 24 ಸಾವಿರ ಜನ ಸ್ಪೇನ್ನಲ್ಲಿ ಮೃತಪಟ್ಟಿದ್ದಾರೆ. ಕಳೆದ ಏಳೆಂಟು ವಾರಗಳಲ್ಲಿ ಪ್ರಥಮ ಬಾರಿ ಜನ ಈಗ ಹೊರಗೆ ತಿರುಗಾಡುತ್ತಿದ್ದಾರೆ.
ಇಟಲಿ: ಕೊರೊನಾದಿಂದ ಅತಿಹೆಚ್ಚು ಬಾಧಿತ ದೇಶ ಇದಾಗಿದೆ. 2 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದ್ದು, 27 ಸಾವಿರ ಜನ ಇಲ್ಲಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಸ್ಥಳೀಯವಾಗಿ ಲಾಕ್ಡೌನ್ ಸಡಿಲಿಸಲಾಗಿದ್ದು, ಹತ್ತಿರದಲ್ಲಿರುವ ಬಂಧು ಬಳಗದವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ.
ಇಂಗ್ಲೆಂಡ್: ಮೇ 7 ರವರೆಗೆ ಇಲ್ಲಿ ಲಾಕ್ಡೌನ್ ಮುಂದುವರಿಯಲಿದೆ. ಅದರ ನಂತರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.
ಜರ್ಮನಿ: ಈ ದೇಶದಲ್ಲಿ ಏ.30 ರಿಂದ ಸಾಕಷ್ಟು ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ದಿನಬಳಕೆಯ ವಸ್ತುಗಳ ಮಾರಾಟ ಸೇರಿದಂತೆ ಧಾರ್ಮಿಕ ಸಮಾವೇಶಗಳಿಗೂ ಅನುಮತಿ ನೀಡಲಾಗಿದೆ.
ಇರಾನ್: ಏಪ್ರಿಲ್ ಮಧ್ಯಭಾಗದಿಂದಲೇ ಲಾಕ್ಡೌನ್ ಸಡಿಲಿಸಲಾಗಿದ್ದು, ವ್ಯಾಪಾರ ವ್ಯವಹಾರಗಳು ಚುರುಕು ಪಡೆದುಕೊಂಡಿವೆ.