ಅರಾರಿಯಾ (ಬಿಹಾರ): ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 70 ಲಕ್ಷ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಏಳು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರಾತ್ರಿ ಟೌನ್ ಪೊಲೀಸ್ ಠಾಣೆ ಪ್ರದೇಶದ ಟೋಲ್ ಪ್ಲಾಜಾದಲ್ಲಿ ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ಎರಡು ಲಾರಿಗಳನ್ನು ತಡೆದು 648 ಪೆಟ್ಟಿಗೆ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅರಾರಿಯಾ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಪುಷ್ಕರ್ ಕುಮಾರ್ ತಿಳಿಸಿದ್ದಾರೆ.
ವಶಪಡಿಸಿಕೊಂಡ ಮದ್ಯದ ಮೌಲ್ಯವು ಮಾರುಕಟ್ಟೆಯಲ್ಲಿ ಸುಮಾರು 70 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇಬ್ಬರು ಚಾಲಕರು ಮತ್ತು ಟ್ರಕ್ ಕ್ಲೀನರ್‌ನನ್ನು ಬಂಧಿಸಲಾಗಿದೆ. ನಂತರ ಎಸ್‌ಯುವಿಯಲ್ಲಿ ಸ್ಥಳಕ್ಕೆ ಆಗಮಿಸಿದ ನಾಲ್ವರನ್ನು ಸಹ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಎರಡು ಲಾರಿ ಮತ್ತು ಎಸ್‌ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಇಷ್ಟೊಂದು ಪ್ರಮಾಣದ ಮದ್ಯವನ್ನು ಅಕ್ರಮವಾಗಿ ಪಶ್ಚಿಮ ಬಂಗಾಳದಿಂದ ಅರಾರಿಯಾ ಮೂಲಕ ಉತ್ತರ ಬಿಹಾರದ ಮುಜಫರ್ಪುರಕ್ಕೆ ಕೊಂಡೊಯ್ಯಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.