ದೇಶದಲ್ಲಿ ಕೋಮು ಸಾಮರಸ್ಯ ಸಾರಬೇಕೆಂದು 12 ವರ್ಷದ ಬಾಲಕನಿದ್ದಾಗಲೇ ಮಹಾತ್ಮಾ ಗಾಂಧೀಜಿ ಕನಸು ಕಂಡಿದ್ದರು. ಅವರ ಬಾಲ್ಯದ ಕನಸೇ ಹಿಂದೂ, ಮುಸ್ಲಿಂ ಹಾಗೂ ಪಾರ್ಸಿಗಳ ನಡುವೆ ಸೌಹಾರ್ದತೆ ತರುವುದಾಗಿತ್ತು. ಈ ಬಗ್ಗೆ ಜೀವನಚರಿತ್ರೆಕಾರ ರಾಜ್ಮೋಹನ್ ಗಾಂಧಿ ತಮ್ಮ ಮೋಹನಾದಾಸ್ ಪುಸ್ತಕದಲ್ಲಿ ಬರೆದಿದ್ದಾರೆ.
ಕಾಕತಾಳಿಯ ಎಂಬಂತೆ, ಇಂಗ್ಲಿಷರಿಂದ ಸ್ಥಾಪಿಸಲ್ಪಟ್ಟ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್ಸಿ), ನಾಲ್ಕು ವರ್ಷಗಳ ಬಳಿಕ ಅಂದರೆ 1885 ರ ಡಿಸೆಂಬರ್‌ನಲ್ಲಿ ಬಾಂಬೆ(ಈಗಿನ ಮುಂಬೈ)ಯಲ್ಲಿ ಮೊದಲ ಹಿಂದೂ ಅಧ್ಯಕ್ಷನನ್ನು ಕಂಡಿತು. ಬಳಿಕ 1886 ರಲ್ಲಿ ಕಲ್ಕತ್ತಾ(ಕೋಲ್ಕತ್ತಾ)ದಲ್ಲಿ ಪಾರ್ಸಿ, 1887 ರಲ್ಲಿ ಮದ್ರಾಸ್ (ಚೆನ್ನೈ)ನಲ್ಲಿ ಮುಸ್ಲಿಂ ಮತ್ತು 1888ರಲ್ಲಿ , ಅಲಹಾಬಾದ್(ಪ್ರಯಾಗ್ರಾಜ್)ನಲ್ಲಿ ಒಬ್ಬ ಇಂಗ್ಲಿಷ್ ಅಧ್ಯಕ್ಷನ ನೇಮಕವಾಯ್ತು.
ಇದಾದ ನಂತರದ ವರ್ಷಗಳಲ್ಲಿ ಈ ಮಾದರಿ ಮುಂದುವರಿದು, ಸಾಂಸ್ಕೃತಿಕ ಬಹುತ್ವ ಮತ್ತು ಜಾತ್ಯತೀತತೆಯ ಬಲವರ್ಧನೆ ಕಂಡಿತು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಂಸ್ಥಾಪಕ ಬ್ರಿಟಿಷ್ ಅಧಿಕಾರಿ ಎ ಒ ಹ್ಯೂಮ್(ಅಲನ್ ಆಕ್ಟೇವಿಯನ್ ಹ್ಯೂಮ್), ಭಾರತದ ಯುವಕರಿಗೆ ನೀಡಿದ ಪ್ರಚೋದನಕಾರಿ ಸಂದೇಶ ಸತ್ಯದ ಮೇಲೆ ಕಾರ್ಯ ನಿರ್ವಹಿಸುವಂತೆ ಪ್ರೇರೇಪಿಸಿತು. ಸ್ವ-ತ್ಯಾಗ ಮತ್ತು ನಿಸ್ವಾರ್ಥತೆಯೇ ಸ್ವಾತಂತ್ರ್ಯ ಮತ್ತು ಸಂತೋಷಕ್ಕೆ ಅಳಿಸಲಾಗದ ಮಾರ್ಗದರ್ಶಿ ಎಂಬ ಸಮಯೋಚಿತ ಮತ್ತು ಸೂಕ್ತ ಸಂದೇಶವನ್ನು ಹ್ಯೂಮ್ ಕೊಟ್ಟರು.
ರಾಜ್‌ಕೋಟ್ ಶಾಲೆಯಲ್ಲಿ ಸಾಂಸ್ಕೃತಿಕ ಬಹುತ್ವ ಮತ್ತು ಮಾನವನ ಏಕತೆಯ ಮೌಲ್ಯಗಳನ್ನು ಅಳವಡಿಸಿಕೊಂಡ ಮೋಹನದಾಸ ಕರಮಚಂದ ಗಾಂಧಿ, ವಕೀಲನಾಗಲು ಇಂಗ್ಲೆಂಡ್‌ಗೆ ತೆರಳುವ ಮುಂಚೆ, ಪರಿಶುದ್ಧತೆ ಮತ್ತು ಶಿಸ್ತಿನ ಜೀವನವನ್ನು ನಡೆಸುವ ಭರವಸೆ ನೀಡಿ, ತಮ್ಮ ತಾಯಿಯ ಪಾದಕ್ಕೆ ಮಂಡಿಯೂರಿದರು. ವಕೀಲನಾಗಿ ದಕ್ಷಿಣ ಆಫ್ರಿಕಾದಲ್ಲೇ ತಮ್ಮ ಆರಂಭಿಕ ಜೀವನದ ಎರಡು ದಶಕಗಳಿಗಿಂತಲೂ ಹೆಚ್ಚು ಸಮಯವನ್ನು ಕಳೆದ ಅವರು, ಅವಮಾನಗಳು ಮತ್ತು ದೈಹಿಕ ಹಲ್ಲೆಗಳಿಗೊಳಗಾದರು. ಬಳಿಕ ಅಲ್ಲಿನ ಜನಾಂಗೀಯ ಧೋರಣೆಗಳ ವಿರುದ್ಧ ಧ್ವನಿ ಎತ್ತಿದರು. ವರ್ಣಭೇದ ನೀತಿಯನ್ನು ಪೋಷಿಸುತ್ತಿದ್ದ ಅಧಿಕಾರಿಗಳ ವಿರುದ್ಧ ಅಹಿಂಸಾತ್ಮಕ ಚಳವಳಿ ಆರಂಭಿಸಿ ಯಶಸ್ಸು ಪಡೆದರು.
1906, ಗಾಂಧೀಜಿಯವರ ಜೀವನದ ಒಂದು ಮಹತ್ವದ ಘಟ್ಟವಾಯ್ತು. ಅಲ್ಲದೇ, ಆಧುನಿಕ ಜಗತ್ತಿನ ಇತಿಹಾಸದಲ್ಲೇ ಪ್ರಮುಖ ದಿನವಾಯ್ತು. ಆ ವರ್ಷವೇ ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ ಹುಟ್ಟು ಪಡೆಯಿತು. ಭಾರತದ ಖ್ಯಾತ ಲೇಖಕ ರಾಮಚಂದ್ರ ಗುಹಾ ಅವರು ಕನ್ನಡ ಸಾಪ್ತಾಹಿಕವೊಂದರಲ್ಲಿ ಉಲ್ಲೇಖಿಸಿದಂತೆ "ಖಡ್ಗದಿಂದ ತುಂಡರಿಸಲಾಗಲಿಲ್ಲ, ಬಂದೂಕಿನಿಂದ ಹಾರಿಸಲಾಗಿಲ್ಲ. ಆದರೆ ಅಸಮಾನತೆಯನ್ನು ಸೋಲಿಸುವಲ್ಲಿ ಗಾಂಧಿಯವರು ಪ್ರದರ್ಶಿಸಿದ ಶೌರ್ಯ ಮಾತ್ರ ಅಮೋಘ." ಇನ್ನೊಂದೆಡೆ ಗುಹಾ ಅವರು ತಮ್ಮ ದಕ್ಷಿಣ ಆಫ್ರಿಕಾದ ಸ್ನೇಹಿತನ ಪತ್ರವೊಂದನ್ನು ಉಲ್ಲೇಖಿಸಿಸುತ್ತಾ, "ನೀವು ನಮಗೆ ವಕೀಲರನ್ನು ನೀಡಿದ್ದೀರಿ ಮತ್ತು ನಾವು ನಿಮಗೆ ಮಹಾತ್ಮರನ್ನು ನೀಡಿದ್ದೇವೆ." ಗಾಂಧಿಯವರ ಸತ್ಯಾಗ್ರಹ ಬಹುಶಃ ಭೂಮಿಯ ಮೇಲಿನ ಅತ್ಯಂತ ಪ್ರಬಲ ಸಾಧನ ಎಂದು ಬಣ್ಣಿಸಿದರು.
ಅವ್ಯವಸ್ಥೆಯಿಂದ ಕೂಡಿದ್ದ ತಾಯ್ನಾಡು ಭಾರತಕ್ಕೆ, ಆಫ್ರಿಕಾದಿಂದ ಮರಳಿದ ಮಹಾತ್ಮ ಗಾಂಧೀಜಿ, ಬ್ರಿಟೀಷರ ಆಡಳಿತಕ್ಕೊಳಗಾಗಿದ್ದ ಭಾರತಕ್ಕೆ ಸ್ವಾತಂತ್ರ್ಯದ ಹೋರಾಟ ಆರಂಭಿಸಿದರು. ಶೋಷಣೆ ಮತ್ತು ಅನ್ಯಾಯದಿಂದ ಅವರನ್ನು ಭಾರತೀಯ ಮುಗ್ಧ ಜನರನ್ನು ಮುಕ್ತಗೊಳಿಸಲು ಪಣ ತೊಟ್ಟರು. ಅಹಿಂಸೆ, ಸತ್ಯಾಗ್ರಹ ಹಾಗೂ ಪ್ರೀತಿಯನ್ನೇ ಆಯುಧವನ್ನಾಗಿಸಿ ತಮ್ಮ ಗುರಿ ಸಾಧಿಸಿದರು.
ಅರಬ್ ಕವಿ ಮಿಖಾಯಿಲ್ ನೊಯೆಮಾ, ಅವರ ಮಾತುಗಳನ್ನು ಉಲ್ಲೇಖಿಸಿದ್ದ ರಾಜ್ - ಮೋಹನ್ ಗಾಂಧಿ, 'ಗಾಂಧಿಯವರ ಕೈಯಲ್ಲಿದ್ದ ಚರಕ ಖಡ್ಗಕ್ಕಿಂತ ಹರಿತವಾಗಿತ್ತು. ಗಾಂಧಿ ತೊಟ್ಟುಕೊಳ್ಳುತ್ತಿದ್ದ ಸರಳ ಹಾಗೂ ತೆಳುವಾದ ಬಿಳಿ ಬಟ್ಟೆ ಒಂದು ರಕ್ಷಾಕವಚವಾಗಿತ್ತು. ಅದನ್ನು, ಸಾಗರ ದಾಟಿ ಬಂದ ಬಂದೂಕುಗಳಿಂದ ಚುಚ್ಚಲು ಸಾಧ್ಯವಾಗಲಿಲ್ಲ. ಅಲ್ಲದೇ ಗಾಂಧಿಯ ದೊಡ್ಡ ಮೇಕೆ ಬ್ರಿಟಿಷ್ ಸಿಂಹಕ್ಕಿಂತಲೂ ಬಲವಾಯ್ತು' ಎಂದು ಬರೆದಿದ್ದರು.
ಅಧಿಕಾರದ ದಾಹ, ಸಂಪತ್ತಿನ ಕೊನೆಯಿಲ್ಲದ ದುರಾಸೆ, ಹಿಂಸೆ, ಭ್ರಷ್ಟಾಚಾರ ಮತ್ತು ಬೆಳೆಯುತ್ತಿರುವ ಬಡತನದಿಂದ ಬಳಲುತ್ತಿರುವ ಆಧುನಿಕ ಜಗತ್ತಿನಲ್ಲಿ ಮಾನವೀಯತೆಯನ್ನು ಕಾಡುವ ಪ್ರಶ್ನೆ ಒಂದೇ. ಅದು ಭವಿಷ್ಯದ ಬಗ್ಗೆ ಏನಾದರೂ ಭರವಸೆ ಇದೆಯೇ ಎಂಬುದು. ಇದಕ್ಕೆ ಉತ್ತರವು ಮಹಾತ್ಮ ಗಾಂಧಿಯವರ ಪರಂಪರೆಯಲ್ಲಿದೆ. ಅದುವೇ ಕತ್ತಲೆಯ ಮಧ್ಯೆ ಬೆಳಕು.
ಬ್ರಿಟೀಷ್ ಪತ್ರಕರ್ತ, ಕಿಂಗ್ಸ್ಲೇ ಮಾರ್ಟಿನ್ ಹೇಳಿದಂತೆ, ಸತ್ಯ ಮತ್ತು ಪ್ರೀತಿಯಿಂದ ಮನುಷ್ಯನ ದುಃಖ, ಕ್ರೌರ್ಯ ಮತ್ತು ಹಿಂಸಾಚಾರವನ್ನು ಜಯಿಸಬಹುದು. ನಂಬಿಕೆಗೆ ಗಾಂಧಿಯವರ ಜೀವನ ಮತ್ತು ಸಾವು ಸಾಕ್ಷಿಯಾಗಿ ಉಳಿಯುತ್ತದೆ. ಈ ಮೂಲಕ ಪ್ರತಿದಿನವೂ ಭವಿಷ್ಯದ ಭರವಸೆಯ ದಾರಿದೀಪವಾಗಿರುವ ಮಹಾತ್ಮ ಗಾಂಧಿಯ ಆ ಸಮಯರಹಿತ ಮೌಲ್ಯಗಳಲ್ಲಿ ನಮ್ಮ ನಂಬಿಕೆಯನ್ನು ನಾವು ಪುನರುಚ್ಚರಿಸುತ್ತೇವೆ.
ಪ್ರೊ. ಎ. ಪ್ರಸನ್ನ ಕುಮಾರ್