ನವದೆಹಲಿ: ನಿನ್ನೆ ಮಧ್ಯಾಹ್ನ ಕೊನೆಯುಸಿರೆಳೆದ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ಪತ್ನಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರದ ಮೂಲಕವೂ ಸಾಂತ್ವನ ಹೇಳಿದ್ದಾರೆ.
ಸೋನಿಯಾ ತಮ್ಮ ಪತ್ರದಲ್ಲಿ 'ಜೇಟ್ಲಿ ತಮ್ಮ ಬದುಕಿನುದ್ದಕ್ಕೂ ರಾಜಕೀಯ ಕ್ಷೇತ್ರದಿಂದಾಚೆಗೂ ಅಸಂಖ್ಯಾತ ಜನ ಸ್ನೇಹಿತರನ್ನು ಹೊಂದಿದ್ದರು. ಜೀವನದ ಕೊನೆಯ ಕ್ಷಣದವರೆಗೂ ತಮ್ಮ ಅನಾರೋಗ್ಯದ ವಿರುದ್ಧ ದಿಟ್ಟವಾಗಿ ಹೋರಾಡಿದ್ದರು. ಜೇಟ್ಲಿ ಸಂಪುಟದಲ್ಲಿದ್ದಾಗ ಅವರ ಚಾಣಾಕ್ಷತನ, ಸಾಮರ್ಥ್ಯ, ಸಂವಹನದ ಕೌಶಲಕ್ಕೆ ಹೆಸರಾಗಿದ್ದರು. ರಾಜ್ಯಸಭೆಯ ನಾಯಕರಾಗಿ, ಸುಪ್ರೀಂಕೋರ್ಟ್ನ ಹಿರಿಯ ನ್ಯಾಯವಾದಿಯಾಗಿ ಅವರು ಪ್ರಮುಖ ಪಾತ್ರ ವಹಿಸಿದ್ದರು' ಎಂದು ಯುಪಿಎ ಅಧ್ಯಕ್ಷೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅನಾರೋಗ್ಯದ ನಡುವೆಯೂ ಅರುಣ್ ಜೇಟ್ಲಿ, ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟವರು. ಅಂತವರ ಅಗಲಿಕೆಯಿಂದ ದೇಶಕ್ಕೆ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. ಅರುಣ್ ಜೇಟ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಪತ್ನಿ, ಮಗ, ಮಗಳಿಗೆ ಅವರ ಅಗಲಿಕೆ ದು:ಖ ಭರಿಸುವ ಶಕ್ತಿ ಕೊಡಲಿ ಎಂದು ಎಐಸಿಸಿ ಅಧ್ಯಕ್ಷೆ ಸಂತಾಪ ಪತ್ರದ ಮೂಲಕ ಪ್ರಾರ್ಥಿಸಿದ್ದಾರೆ.