ಶ್ರೀನಗರ (ಜಮ್ಮು ಕಾಶ್ಮೀರ): ಕಣಿವೆನಾಡಿನ ಬದ್ಗಾಂನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಎಲ್ಇಟಿಯೊಂದಿಗೆ ಸಂಪರ್ಕ ಹೊಂದಿದ್ದ ಐವರು ಭಯೋತ್ಪಾದಕರನ್ನು ಭಾರತೀಯ ಸೇನೆ ಸೆರೆಹಿಡಿದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ.
ನಿಖರ ಮಾಹಿತಿಯ ಮೇರೆಗೆ ಬದ್ಗಾಂ ಪೊಲೀಸರು ಹಾಗೂ 2 ರಾಷ್ಟ್ರೀಯ ರೈಫಲ್ಸ್ನ ತುಕಡಿಗಳು ನರ್ಬಲ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, ಕುರ್ಹಾಮಾ ಬದ್ಗಾಂನ ಇಮ್ರಾನ್ ರಶೀದ್, ಚೆಕ್ ಕವೂಸಾದ ಇಫ್ಷಾನ್ ಅಹಮದ್ ಗ್ಯಾನಿ, ಕವೂಸಾ ಖಲಿಸಾದ ಓವೈಸ್ ಅಹಮದ್, ಕುರ್ಹಾಮಾ ಬದ್ಗಾಂನ ಮೊಹಸಿನ್ ಖಾದಿರ್, ಅರ್ಚನ್ದೇರ್ಹಮಾ ಮಗಮ್ನ ಅಬಿದ್ ರಾದರ್ ಎಂಬುವರನ್ನು ಬಂಧಿಸಲಾಗಿದೆ.
ಈ ಭಯೋತ್ಪಾದಕರಿಂದ ಎಕೆ - 47ನ 28 ಗುಂಡುಗಳು, ಒಂದು ಎಕೆ - 47 ಬಂದೂಕು, ಲಷ್ಕರ್ ಎ ತೋಯ್ಬಾದ 20 ಪೋಸ್ಟರ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಭಯೋತ್ಪಾದಕರ ಗುಂಪು ಲಷ್ಕರ್ ಎ ತೋಯ್ಬಾಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದು, ಕೆಲವು ತಿಂಗಳುಗಳಿಂದ ಸಕ್ರಿಯವಾಗಿತ್ತು. ಇವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯ 101/2020ರ ಸೆಕ್ಷನ್ ಅಡಿಯಲ್ಲಿ ಮಗಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.