ನವದೆಹಲಿ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್ ವಿಲಾಸ್ ಪಾಸ್ವಾನ್ (74) ನಿನ್ನೆ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ನಾಳೆ ಬಿಹಾರದ ಪಾಟ್ನಾದಲ್ಲಿ ನಡೆಯಲಿದೆ.
ನವದೆಹಲಿಯಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಇಂದು ವಿವಿಧ ಗಣ್ಯರು ಅಂತಿಮ ನಮನ ಸಲ್ಲಿಕೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಅಗಲಿರುವ ಆಪ್ತನಿಗೆ ಗೌರವ ಸಲ್ಲಿಸಿದರು. ಇಂದು ಸಂಜೆ 5 ಗಂಟೆಗೆ ಪಾಸ್ವಾನ್ ಪಾರ್ಥಿವ ಶರೀರ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಪಾಟ್ನಾಗೆ ತೆಗೆದುಕೊಂಡು ಹೋಗಲು ನಿರ್ಧರಿಸಿರುವುದಾಗಿ ಮಗ ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.
ದಲಿತ ನಾಯಕ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ
ಮೊದಲು ಪಾಟ್ನಾ ವಿಧಾನಸಭಾ ಭವನ ತದನಂತರ ಪಾಟ್ನಾ ಪಾರ್ಟಿ ಕಾರ್ಯಾಲಯದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 10:30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಇದಾದ ಬಳಿಕ ಬೆಳಗ್ಗೆ 8 ಗಂಟೆಗೆ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಎಸ್.ಕೆ ಪುರಿಯ ಬೋರಿಂಗ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗುವುದು. ಇದಾದ ಬಳಿಕ ನಾಳೆ ಮಧ್ಯಾಹ್ನ 1:30ಕ್ಕೆ ಸಕಲ ಸರ್ಕಾರಿ ವಿಧಿ-ವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಮಗ ಚಿರಾಗ್ ತಿಳಿಸಿದ್ದಾರೆ.