ನವದೆಹಲಿ: ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಗೂಂಡಾಗಳ ಮುಂದೆ ಶರಣಾಗಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ವಿಕ್ರಂ ಜೋಶಿ ನಂತರ ಇದೀಗ ಕಾನ್ಪುರದಲ್ಲಿ ಅಪಹರಣಕ್ಕೊಳಗಾದ ಸಂಜೀತ್ ಯಾದವ್ನನ್ನೂ ಸಹ ಕೊಲ್ಲಲಾಗಿದೆ. ರಾಜ್ಯದ ಪೊಲೀಸರು ಅಪಹರಣಕಾರರಿಂದಲೇ ಹಣ ಪಡೆದು ಆತನನ್ನು ಕೊಂದಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಉತ್ತರಪ್ರದೇಶ ರಾಜ್ಯ ಗೂಂಡಾಗಳ ರಾಜ್ಯವಾಗಿದೆ. ಈ ಜಂಗಲ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಗೂಂಡಾಗಳ ಮುಂದೆ ಶರಣಾಗಿದೆ ಎಂದು ಕಿಡಿಕಾರಿದ್ದಾರೆ.
ವಿಕಾಸ್ ದುಬೆ ಘಟನೆ ಮತ್ತು ಗಾಜಿಯಾಬಾದ್ ಮೂಲದ ಪತ್ರಕರ್ತ ವಿಕ್ರಮ್ ಜೋಶಿ ಪ್ರಕರಣವೇ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂಬುದಕ್ಕೆ ತಾಜಾ ಸಾಕ್ಷಿಯಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ರಾಜ್ಯದಲ್ಲಿ ಮಿತಿಮೀರಿದ ಗೂಂಡಾಗಳ ಹಾವಳಿಯಿಂದಾಗಿ ಸಾಮಾನ್ಯ ಜನರು ಬದುಕುವುದೇ ಕಷ್ಟವಾಗಿದ್ದು, ಇದಕ್ಕೆಲ್ಲಾ ಯೋಗಿ ಆದಿತ್ಯನಾಥ್ ಸರ್ಕಾರವೇ ಕಾರಣ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.