ಮಾಂಡ್ಸೌರ್, (ಮಧ್ಯಪ್ರದೇಶ): ಪ್ರಾಣಿಗಳ ಮೇಲೆ ಹಿಂಸಾಚಾರ ಹೆಚ್ಚುತ್ತಿರುವ ಸಂದರ್ಭದಲ್ಲೂ ಇಲ್ಲಿನ ಉಮ್ರವ್ ಸಿಂಗ್ ಎಂಬ ರೈತ ತನ್ನ ಗೂಳಿ ಸಾವನ್ನಪ್ಪಿದಾಗ ಕುಟುಂಬ ಸದಸ್ಯರ ಅಂತ್ಯಕ್ರಿಯೆ ನಡೆಸುವಂತೆಯೇ ಗೂಳಿಯ ಅಂತ್ಯಕ್ರಿಯೆ ನಡೆಸಿದ್ದಾನೆ.
18 ವರ್ಷಗಳ ಹಿಂದೆ ಗೂಳಿಯನ್ನು ಖರೀದಿಸಿದ್ದ ರೈತ ಉಮ್ರವ್ ಸಿಂಗ್, ಅದಕ್ಕೆ 'ರೆಂಡಾ' ಎಂದು ಹೆಸರಿಟ್ಟಿದ್ದ, ಅದನ್ನು ಕುಟುಂಬ ಸದಸ್ಯರಂತೆಯೇ ನೋಡಿಕೊಳ್ಳುತ್ತಿದ್ದ.
'ಗೂಳಿಯ ಆಗಮನದಿಂದಾಗಿ ನನ್ನ ಲಕ್ ಖುಲಾಯಿಸಿತ್ತು. ವ್ಯವಹಾರವೂ ಚೆನ್ನಾಗಿ ನಡೆಯಿತು. ಹಾಗಾಗಿ ಈ ಗೂಳಿ ಅದೃಷ್ಟ ಅಂತಾ ನಾನು ತಿಳಿದಿದ್ದೆ. ಸಹಜವಾಗಿಯೇ ಅದರ ಮೇಲೆ ಪ್ರೀತಿಯೂ ಹೆಚ್ಚಿತ್ತು ಅಂತಾನೆ ಗೂಳಿಯ ಮಾಲೀಕ ಉಮ್ರವ್ ಸಿಂಗ್. ಆದರೆ, ಅದೇನಾಯ್ತೋ ಏನೋ ಗೂಳಿ ಸಾವನ್ನಪ್ಪಿತು. ಇದರಿಂದಾಗಿ ಸಾಕಷ್ಟು ದುಃಖಿತನಾದ ಉಮ್ರವ್ ತನ್ನ ಕುಟುಂಬ ಸದಸ್ಯರೊಬ್ಬರು ಕಳೆದುಕೊಂಡಷ್ಟೇ ನೋವು ಅನುಭವಿಸಿದ್ದ. ಹಾಗಾಗಿ ಅಂತ್ಯಕ್ರಿಯೆಯಾಗಿ 13ನೇ ದಿನದಂದು ಗ್ರಾಮಸ್ಥರನ್ನು ಕರೆಯಿಸಿ ಹಿಂದೂ ಧರ್ಮದ ಪ್ರಕಾರ ಉತ್ತರಕ್ರಿಯೆ ಅಂದ್ರೇ ತಿಥಿಯನ್ನೂ ನಡೆಸಿದ್ದಾನೆ. ಜತೆಗೆ ತಿಥಿ ಕಾರ್ಯಕ್ಕೆ ಬಂದ ಊರ ಜನರಿಗೆಲ್ಲ ಊಟ ಹಾಕಿಸಿದ್ದಾನೆ. ರೈತನ ಈ ನಡೆಯನ್ನ ಕಂಡು ಜನ ಕೂಡ ಶ್ಲಾಘಿಸಿದ್ದಾರೆ.