ಪಾಟ್ನಾ: ಕೌಟುಂಬಿಕ ಹಿಂಸಾಚಾರದ ಆರೋಪ ಹೊರಿಸಿರುವ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅವರ ಸೊಸೆ ಐಶ್ವರ್ಯಾ ರಾಯ್ ಅವರು ಶುಕ್ರವಾರ ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರ ಕಣಕ್ಕೆ ಧುಮುಕಿದ್ದು, ತಮ್ಮ ಮಾವನ ಪ್ರತಿಸ್ಪರ್ಧಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಕ್ಷದ ಪರ ಮತ ಯಾಚಿಸಿದ್ದಾರೆ.
ತಂದೆ ಚಂದ್ರಿಕಾ ರಾಯ್ ಅವರ ಪರ ಮತಗಳನ್ನು ಕೋರಿ ಪಾರ್ಸಾ (ಸರನ್) ದಲ್ಲಿ ರೋಡ್ ಶೋ ನಡೆಸಿದ ಅವರು, ತನಗೆ ಆಗಿರುವ ಅನ್ಯಾಯಕ್ಕೆ ಮತ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದರು.
ಲಾಲು ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಜೊತೆಗಿನ ವಿವಾಹ ಸಂಬಂಧ ಕಳೆದುಕೊಳ್ಳಲು ಐಶ್ವರ್ಯ ರಾಯ್ ವಿಚ್ಛೇದನ ಕೋರಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಐಶ್ವರ್ಯಾ ರಾಜಕೀಯ ಕುಟುಂಬದಿಂದ ಬಂದವರು. ಇವರು ಬಿಹಾರದ ಮಾಜಿ ಮುಖ್ಯಮಂತ್ರಿ ದಾರೋಗಾ ಪ್ರಸಾದ್ ರಾಯ್ ಪುತ್ರ ಚಂದ್ರಿಕಾ ರಾಯ್ ಅವರ ಮಗಳು. ಈ ಹಿಂದೆ ಆರ್‌ಜೆಡಿ ಸದಸ್ಯರಾಗಿದ್ದ ಚಂದ್ರಿಕಾ ರಾಯ್ ತಮ್ಮ ಪುತ್ರಿಯ ವಿವಾಹ ಸಂಬಂಧದಲ್ಲಿ ಬಿರುಕು ಮೂಡಿದ ನಂತರ ಜೆಡಿಯು ಪಕ್ಷ ಸೇರಿಕೊಂಡರು.
ಪಾರ್ಸಾ ಕ್ಷೇತ್ರದಿಂದ ಸ್ಪರ್ದಿಸುತ್ತಿರುವ ಚಂದ್ರಿಕಾ ರಾಯ್ ಅವರ ಪ್ರತಿಸ್ಪರ್ಧಿಯಾಗಿ ಜೆಡಿಯು ಪಕ್ಷದಿಂದ ಛೋಟೆಲಾ ರಾಯ್ ಅವರು ಕಣದಲ್ಲಿದ್ದಾರೆ. ಈ ಕ್ಷೇತ್ರದಿಂದ ಇತರ ಎಂಟು ಅಭ್ಯರ್ಥಿಗಳು ಸಹ ಕಣದಲ್ಲಿದ್ದು, ಇಬ್ಬರಲ್ಲಿ ಒಬ್ಬ ರಾಯ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.