ಪುಡಿಕ್ಕೊಟ್ಟೈ (ತಮಿಳುನಾಡು): ನಿಮಗೆ ಗಂಡು ಮಗು ಜನಿಸಬೇಕಾದಲ್ಲಿ ಮಗಳನ್ನು ಕೊಲ್ಲಬೇಕು ಎಂದು ವ್ಯಕ್ತಿಯೊಬ್ಬನಿಗೆ ಸಲಹೆ ನೀಡಿದ್ದ ಪುಡಿಕ್ಕೊಟ್ಟೈ ಮೂಲದ ಮಾಟಗಾತಿ ವಸಂತಿ ಎಂಬ ಮಹಿಳೆ ಮತ್ತು ಆಕೆಯ ಸಹಾಯಕಿ ಮುರುಗಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪುಡಿಕ್ಕೊಟ್ಟೈನ ಕಂಧ್ರವಕೋಟೈ ಪ್ರದೇಶದಲ್ಲಿ 13 ವರ್ಷದ ಬಾಲಕಿ ವಿದ್ಯಾಳನ್ನು ಹಳ್ಳಿಯ ಕೊಳದಿಂದ ನೀರು ತರುತ್ತಿದ್ದಾಗ ಕೊಲೆ ಮಾಡಲಾಗಿತ್ತು. ಆ ಪ್ರಕರಣದ ಹಿಂದೆ ಆಕೆಯ ತಂದೆ ಪನೀರ್‌ಸೆಲ್ವಂನ ಕೈವಾಡವಿರುವುದು ಬೆಳಕಿಗೆ ಬಂದಿದ್ದು ಅತನನ್ನೂ ಬಂಧಿಸಲಾಗಿತ್ತು.
ಪನೀರ್‌ಸೆಲ್ವಂಗೆ ಗಂಡು ಮಗು ಬೇಕೆಂಬ ಆಸೆ ಇದ್ದಿದ್ದರಿಂದ, ಮಗಳನ್ನು ಕೊಂದರೆ ಆಸೆ ಈಡೇರಲಿದೆ ಎಂದು ಮಾಟಗಾತಿ ವಸಂತಿ ಸಲಹೆ ನೀಡಿದ್ದಳೆಂಬ ವಿಚಾರ ತನಿಖೆ ವೇಳೆ ಗೊತ್ತಾಗಿತ್ತು.