ಪಿಥೋರ್ಗರ್ : ಗಾಲ್ವಾನ್ ವ್ಯಾಲಿಯಲ್ಲಿ ನಡೆದ ಭಾರತ- ಚೀನಾ ನಡುವಿನ ಗಡಿ ಘರ್ಷಣೆಯ ಬಳಿಕ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಉತ್ತರಾಖಂಡದ ಮುನ್ಸಿಯಾರಿ - ಬುಗ್ಡಿಯಾರ್ - ಮಿಲಾಮ್ ರಸ್ತೆ ಕಾಮಗಾರಿಯನ್ನು ತ್ವರಿತಗೊಳಿಸಿದೆ.
ವರದಿಗಳ ಪ್ರಕಾರ, ಇಂಡೋ - ಚೀನಾ ಗಡಿ ಸಮೀಪ ರಸ್ತೆ ನಿರ್ಮಾಣ ಯೋಜನೆಗಳನ್ನು ತ್ವರಿತಗೊಳಿಸುವ ಉದ್ದೇಶದಿಂದ ಕಾಮಗಾರಿಗೆ ವೇಗ ನೀಡಲಾಗಿದೆ. ರಸ್ತೆ ನಿರ್ಮಾಣ ಪೂರ್ಣಗೊಂಡರೆ ಪಿಥೋರ್ಗರ್ ಜಿಲ್ಲೆಯ ಜೋಹರ್ ಕಣಿವೆಯ ಎತ್ತರದ ಹಿಮಾಲಯನ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಮುನ್ಸಿಯಾರಿ - ಬೊಗ್ಡಿಯಾರ್ - ಮಿಲಾಮ್ ರಸ್ತೆ, ಇಂಡೋ - ಚೀನಾ ಗಡಿಯಲ್ಲಿರುವ ಕೊನೆಯಲ್ಲಿರುವ ಪ್ರದೇಶಗಳಿಗೆ ಸಂಪರ್ಕ ಕೊಂಡಿಯಾಗಲಿದೆ.
ಲಿಪುಲೆಖ್ ರಸ್ತೆ ಕಾಮಗಾರಿ ಮುಗಿಸಿದ ಬಳಿಕ ಇದೀಗ ಮಿಲಾಂನಿಂದ ಚೀನಾ ಗಡಿಯವರೆಗಿನ ರಸ್ತೆ ಕಾಮಗಾರಿಗೆ ಬಿಆರ್‌ಒ ವೇಗ ನೀಡಿದೆ. ಇದಕ್ಕಾಗಿ ಮುನ್ಸಿಯಾರಿಯಿಂದ ಹೆಲಿಕಾಪ್ಟರ್ ಮೂಲಕ ಭಾರಿ ಯಂತ್ರೋಪಕರಣಗಳನ್ನು ಲಾಸ್ಪಾಗೆ ತಲುಪಿಸಲಾಗುತ್ತಿದೆ. ಲಾಸ್ಪಾದಲ್ಲಿ ಕಲ್ಲು ಕತ್ತರಿಸುವ ಯಂತ್ರಗಳ ಕೊರತೆಯಿಂದ ರಸ್ತೆ ಕಾಮಗಾರಿ ವಿಳಂಬವಾಗಿತ್ತು.