ನವದೆಹಲಿ: ಹೆಚ್ಚುವರಿ ಹಣದ ಹೊರತಾಗಿಯೂ, ವೈದ್ಯಕೀಯ ಹೂಡಿಕೆ ಮತ್ತು ಆರೋಗ್ಯ ಮೂಲಸೌಕರ್ಯಗಳ ಕೊರತೆಯಿಂದ ಭಾರತದಲ್ಲಿ ಕೊರೊನಾ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ಮಾಡುವುದು ಸವಾಲಾಗಿದೆ ಎಂದು ಫಿಚ್ ಸೊಲ್ಯೂಷನ್ಸ್ ಹೇಳಿದೆ.
10,000 ನಾಗರಿಕರಿಗೆ 8.5 ಆಸ್ಪತ್ರೆ ಹಾಸಿಗೆಗಳು ಮತ್ತು 10,000ಕ್ಕೆ ಎಂಟು ವೈದ್ಯರನ್ನು ಹೊಂದಿರುವ ದೇಶದ ಆರೋಗ್ಯ ಕ್ಷೇತ್ರ ಸಂಬಂಧ ಭಾರತದ ಆರೋಗ್ಯ ಇಲಾಖೆ ಇದನ್ನು ಪರಿಹರಿಸಲು ಮುಂದಾಗುತ್ತಿಲ್ಲ ಎಂದಿದೆ. ಇದಲ್ಲದೇ, ಸಾರ್ವಜನಿಕ ವಲಯದಲ್ಲಿ ಆರೋಗ್ಯ ವಿತರಣಾ ವ್ಯವಸ್ಥೆಗಳ ಅಸಮರ್ಥತೆ, ನಿಷ್ಕ್ರಿಯತೆ ಮತ್ತು ತೀವ್ರ ಕೊರತೆಯು ಜನಸಂಖ್ಯೆ ಹೆಚ್ಚುತ್ತಿರುವ ಅಗತ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದೆ.
ಜನಸಂಖ್ಯೆಯ 80 ಪ್ರತಿಶತಕ್ಕಿಂತಲೂ ಹೆಚ್ಚಿನವರು ಇನ್ನೂ ಕೂಡ ಯಾವುದೇ ಮಹತ್ವದ ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿಲ್ಲ. ಸರಿಸುಮಾರು 68 ಪ್ರತಿಶತದಷ್ಟು ಭಾರತೀಯರು ಸೀಮಿತ ಅಥವಾ ಅಗತ್ಯ ಔಷಧಗಳನ್ನು ಪಡೆದುಕೊಳ್ಳಲಾಗುತ್ತಿಲ್ಲ. ಕಳೆದ ಎರಡು ದಶಕಗಳಲ್ಲಿ, ಉಚಿತ ಔಷಧಗಳ ಲಭ್ಯತೆಯು ಒಳರೋಗಿಗಳ ಚಿಕಿತ್ಸಾ ಸಂಬಂಧ ಶೇಕಡಾ 31.2 ರಿಂದ 8.9 ಕ್ಕೆ ಇಳಿದಿದೆ ಮತ್ತು ಹೊರರೋಗಿಗಳ ಚಿಕಿತ್ಸಾ ಸಂಬಂಧ ಶೇಕಡಾ 17.8 ರಿಂದ 5.9 ಕ್ಕೆ ಇಳಿದಿದೆ ಎಂದು ರೇಟಿಂಗ್ ಏಜೆನ್ಸಿ ಉಲ್ಲೇಖಿಸಿದೆ.