ಕುಚಿಪುಡಿಯ ಖ್ಯಾತ ನೃತ್ಯಗಾರ್ತಿ ಶೋಭಾ ನಾಯ್ಡು ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಶೋಭಾ ನಾಯ್ಡು ಅಗಲಿಕೆಗೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
1956 ರಲ್ಲಿ ಆಂಧ್ರ ಪ್ರದೇಶದ ಅನಕಪಳ್ಳಿಯಲ್ಲಿ ಜನಿಸಿದ ಇವರು, ವೆಂಪತಿ ಚಿನ್ನ ಸತ್ಯಂ ಅವರಿಂದ ತಮ್ಮ 6ನೇ ವಯಸ್ಸಿನಲ್ಲಿ ನೃತ್ಯಾಭ್ಯಾಸ ಶುರು ಮಾಡಿದರು. ಇವರಿಗೆ 1991 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮದ್ರಾಸ್ನ ಶ್ರೀ ಕೃಷ್ಣ ಗಣ ಸಭೆಯಿಂದ ನೃತ್ಯ ಚೂಡಾಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2001 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಕಳೆದ 40 ವರ್ಷಗಳಿಂದ ಹೈದರಾಬಾದ್ನಲ್ಲಿರುವ ಕುಚಿಪುಡಿ ಆರ್ಟ್ ಅಕಾಡೆಮಿ ಪ್ರಾಂಶುಪಾಲರಾಗಿ ಕಾರ್ಯ ಶೋಭಾ ನಾಯ್ಡು ನಿರ್ವಹಿಸಿದ್ದಾರೆ. ಜತೆಗೆ ದೇಶ, ವಿದೇಶಗಳ 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ವಿದ್ಯೆಯನ್ನು ಧಾರೆ ಎರೆದಿದ್ದಾರೆ.