ಬೆಂಗಳೂರು: ಈ ಹಿಂದೆ ಸೌರಫಲಕ ಸ್ಥಾಪನೆ, ಉಪ-ವಾಯು ವ್ಯವಸ್ಥೆ ಎಸ್‌ಟಿಪಿ ಸ್ಥಾವರ, ಮಳೆ ನೀರು ಕೊಯ್ಲು ಹಾಗೂ ಜೈವಿಕ ಅನಿಲ ಘಟಕದಂತಹ ಹಲವಾರು ಪರಿಸರಸ್ನೇಹಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇದೀಗ ಮತ್ತೊಂದು ಪರಿಸರ ಸ್ನೇಹಿ ಕಾರ್ಯದೆಡೆಗೆ ಹೆಜ್ಜೆಯಿಟ್ಟಿದೆ.
ತ್ಯಾಜ್ಯ ನಿರ್ವಹಣಾ ಕ್ರಮಗಳನ್ನು ಜಾರಿಗೆ ತರುವ ಉದ್ದೇಶದಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್ 'ಬಾಟಲ್ ಕ್ರಷರ್' ಅಳವಡಿಕೆ ಮಾಡಲಾಗಿದೆ. ಇದರ ಉದ್ಘಾಟನೆಯನ್ನು ಕೆಎಸ್‌ಸಿಎ ಅಧ್ಯಕ್ಷ ಹಾಗೂ ಮಾಜಿ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟಿಗ ರೋಜರ್ ಬಿನ್ನಿ ನೆರವೇರಿಸಿದ್ದಾರೆ. ಬಳಿಕ ಮಾತನಾಡಿದ ಅವರು ನಾವು ಮತ್ತೊಂದು 'ಗೋ ಗ್ರೀನ್' ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಭವಿಷ್ಯದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸುವ ಬಗ್ಗೆಯೂ ಯೋಚಿಸುತ್ತಿದ್ದೇವೆ. ಸದ್ಯಕ್ಕೆ ಬಾಟಲ್ ಕ್ರಷರ್ ಅಳವಡಿಸಿದ್ದು, ಶೇ.85 ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ತೊಡೆದುಹಾಕಲು ಇದು ನಮಗೆ ಸಹಾಯ ಮಾಡುತ್ತದೆ ಎಂದರು.
ರಿಲಾಯನ್ಸ್ ಇಂಡಸ್ಟ್ರೀಸ್ ಹಾಗೂ ಬಯೋಕ್ರಕ್ಸ್ ಇಂಡಿಯಾ ಸಹಾಯದಿಂದ ಯಂತ್ರವನ್ನು ಸ್ಥಾಪಿಸಲಾಗಿದೆ. ಈ ಯಂತ್ರವು ಒಂದು ವರ್ಷದಲ್ಲಿ ಸುಮಾರು ನಾಲ್ಕು ಲಕ್ಷ ಬಾಟಲ್ಗಳನ್ನು ಕತ್ತರಿಸಲಿದೆ. ಹೀಗೆ ಚೂರು ಚೂರಾದ ಪ್ಲಾಸ್ಟಿಕ್ ತುಂಡುಗಳನ್ನು ಕ್ಯಾಪ್, ಸ್ವೆಟ್ ಶರ್ಟ್ಸ್ ಹಾಗೂ ಸ್ಪೋರ್ಟ್ ಶೂಗಳಂತಹ ವಸ್ತುಗಳನ್ನು ತಯಾರಿಕೆಯಲ್ಲಿ ಮರುಬಳಸಲಾಗುತ್ತದೆ.
ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ದೃಷ್ಟಿಯಿಂದ ಈ ಕಾರ್ಯ ಕೈಗೊಳ್ಳಲಾಗಿದೆ. ನಮ್ಮ ಈ ಚಿಕ್ಕ ಪ್ರಯತ್ನವು ಇತರ ರಾಜ್ಯಗಳಿಗೂ ಮಾದರಿಯಾಗಲಿದೆ ಎಂಬ ಭರವಸೆಯಿದೆ. ಅಲ್ಲದೇ ಇದು ಮಕ್ಕಳಲ್ಲೂ ಸಹ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸಲಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರದ ಮೇಲೆ ಧನಾತ್ಮಕ ಪರಿಣಾಮ ಬೀರುವಲ್ಲಿ ನಮ್ಮ ಈ ಪ್ರಯತ್ನವು ಯಶಸ್ವಿಯಾಗಲಿದೆ ಎಂದು ರೋಜರ್ ಬಿನ್ನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.