ಕೋಟಾ (ರಾಜಸ್ಥಾನ): ಕೊರೊನಾ ಎಂಬುದು ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೇ ಅಂಟಿಕೊಂಡ ಡೆಡ್ಲಿ ವೈರಸ್ ಆಗಿದೆ. ಜಾಗೃತರಾಗಿರುವಂತೆ ಎಷ್ಟು ಮನವಿ ಮಾಡಿದರೂ ಜನರು ಮಾತ್ರ ಮನೆಯಿಂದ ಹೊರ ಬರುತ್ತಲೇ ಇದ್ಧಾರೆ. ಈ ನಡುವೆ ರಾಜಸ್ಥಾನದ ಕೋಟಾ ಜಿಲ್ಲೆಯು ಇತರ ರಾಜ್ಯಗಳಿಗೆ ಮಾದರಿ ಆಗಿ ನಿಂತಿದೆ.
ಈ ಲಾಕ್ ಡೌನ್ ಸಮಯದಲ್ಲೂ ಕೋಚಿಂಗ್ಗಾಗಿ ದೇಶದ ವಿವಿಧೆಡೆಗಳಿಂದ ಬಂದಿರುವ ಸುಮಾರು 35,000 ವಿದ್ಯಾರ್ಥಿಗಳು ಕೋಟಾದಲ್ಲಿ ನೆಲೆಸಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿವಿಧ ಕಡೆಯಿಂದ ಬಂದಿರುವ ಹಾಸ್ಟೆಲ್ನಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ತಮ್ಮ ತಮ್ಮ ಕೋಣೆಗಳಲ್ಲಿ ಪ್ರತ್ಯೇಕವಾಗಿರುವುದಲ್ಲದೆ, ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮೊದಲ ಆದ್ಯತೆ ನೀಡಿದ್ದಾರೆ.
ಇತ್ತೀಚೆನ ದಿನಗಳಲ್ಲಿ ಕೋಟಾ ಬಹಳ ಶಿಸ್ತನ್ನು ಅನುಸರಿಸುತ್ತಿದೆ. ಆರೋಗ್ಯ ಇಲಾಖೆ ,ಸರ್ಕಾರ ನೀಡುತ್ತಿರುವ ಎಲ್ಲಾ ಸಲಹೆ, ಸೂಚನೆಗಳನ್ನು ಇಲ್ಲಿ ಅನುಸರಿಸಲಾಗುತ್ತಿದೆ. ಕೋಚಿಂಗ್ ಸೆಂಟರ್ಗಳ ಮಾರ್ಗದರ್ಶನದ ಮೇರೆಗೆ ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಳಿಗೆ ತಯಾರಾಗುತ್ತಿದ್ಧಾರೆ. ಯಾವುದಾದರೂ ವಿಷಯದ ಬಗ್ಗೆ ಅನುಮಾನ ಇದ್ದಲ್ಲಿ ದೂರವಾಣಿ ಮೂಲಕ ಶಿಕ್ಷಕರಿಗೆ ಕರೆ ಮಾಡಿ ಅನುಮಾನ ಬಗೆಹರಿಸಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಕೋಟಾದಲ್ಲಿ ವಿವಿಧ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಬರುತ್ತಾರೆ.
'ಲಾಕ್ ಡೌನ್ನಿಂದ ಕೋಚಿಂಗ್ ಸೆಂಟರ್ಗಳು ಕೆಲಸ ಮಾಡುತ್ತಿಲ್ಲ. ಆದರೆ ನನ್ನ ಕೋರ್ಸ್ ಈಗಾಗಲೇ ಪೂರ್ಣಗೊಂಡಿದೆ. ಒಂದು ವೇಳೆ ನನಗೆ ಏನಾದರೂ ಅನುಮಾನ ಇದ್ದಲ್ಲಿ ಅದನ್ನು ನೋಟ್ ಮಾಡಿಕೊಂಡು ಫೋನ್ ಮೂಲಕ ಟೀಚರ್ಗಳನ್ನು ಸಂಪರ್ಕಿಸುತ್ತೇನೆ. ಶಿಕ್ಷಕರೂ ಕೂಡಾ ನಮಗೆ ಆಗ್ಗಾಗ್ಗೆ ಫೋನ್ ಮಾಡಿ ನಮ್ಮ ಓದಿನ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ' ಎಂದು ಮೆಡಿಕಲ್ ಪರೀಕ್ಷೆಗೆ ತಯಾರಾಗುತ್ತಿರುವ ಪ್ರತ್ಯೂಷ್ ರವಿ ಎಂಬ ವಿದ್ಯಾರ್ಥಿ ಹೇಳುತ್ತಾರೆ.
ಇನ್ನು ಬಿಹಾರದ ನವಾಡ ಜಿಲ್ಲೆಯ ಅಖಿಲೇಶ್ ಯಾದವ್ ಎಂಬ ವಿದ್ಯಾರ್ಥಿ ನೀಟ್ ಪರೀಕ್ಷೆಗೆ ಸಿದ್ಧರಾಗುತ್ತಿದ್ಧಾರೆ. 'ಲಾಕ್ ಡೌನ್ಗಿಂತ ಮುನ್ನ ಕೂಡಾ ನಾನು ರೂಮ್ನಿಂದ ಹೆಚ್ಚಾಗಿ ಹೊರ ಹೋಗುತ್ತಿರಲಿಲ್ಲ. ಓದುವುದರಲ್ಲೇ ಹೆಚ್ಚು ಸಮಯ ಮೀಸಲಿಡುತ್ತಿದ್ದೆ. ಆದರೆ ಈಗ ಏನಾದರೂ ಅವಶ್ಯಕ ಸಾಮಗ್ರಿ ಬೇಕೆಂದರೆ ಮಾತ್ರ ಹೊರಹೋಗುತ್ತೇನೆ, ಇಲ್ಲವಾದಲ್ಲಿ ನನ್ನ ರೂಮ್ನಲ್ಲೇ ಇರುತ್ತೇನೆ' ಎನ್ನುತ್ತಾರೆ.
ಇನ್ನು ಈ ವಿದ್ಯಾರ್ಥಿಗಳು ಹೇಳುವ ಪ್ರಕಾರ ಲಾಕ್ ಡೌನ್ನಿಂದ ಪರೀಕ್ಷೆಗಳು ಮುಂದೂಡಲಾಗಿರುವುದರಿಂದ ಓದಲು ಹೆಚ್ಚು ಸಮಯ ದೊರೆತಿದೆ. ನಮ್ಮ ಬಳಿ ಆ್ಯಂಡ್ರಾಯ್ಡ್ ಫೋನ್ ಕೂಡಾ ಇಲ್ಲ, ಇದರಿಂದ ನಮಗೆ ಕೆಲವೊಮ್ಮೆ ಬೇಸರವಾಗುತ್ತದೆ, ಹಾಸ್ಟೆಲ್ನಲ್ಲಿ ಎಲ್ಲಿ ಬೇಕೆಂದರಲ್ಲಿ ಹೋಗಲು ನಿರ್ಬಂಧವಿದೆ. ಊಟಕ್ಕೆ ಕೂಡಾ ಯಾವುದೇ ವಿದ್ಯಾರ್ಥಿ ಒಟ್ಟಿಗೆ ಬರುವುದಿಲ್ಲ ಎನ್ನಲಾಗಿದೆ.
ಇನ್ನು ಹಾಸ್ಟೆಲ್ನಲ್ಲಿ ಒಂದು ರೂಮ್ನಲ್ಲಿ ಒಬ್ಬರೇ ವಿದ್ಯಾರ್ಥಿ ಇರುತ್ತಾರೆ. ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದಂತೆ ಹಾಸ್ಟೆಲ್ ಕೋಣೆಗಳಿಗೆ ಸೋಡಿಯಂ ಹೈಫೋಕ್ಲೋರೈಟ್ ದ್ರಾವಣವನ್ನು ಸಿಂಪಡಿಸಲಾಗುತ್ತಿದೆಯಂತೆ. ಪ್ರತಿ ವರ್ಷ ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಂಜಿನಿಯರಿಂಗ್, ಮೆಡಿಕಲ್ ಪರೀಕ್ಷೆಗಳಿಗೆ ತಯಾರಾಗಲು ಕೋಟಾಗೆ ಬರುತ್ತಾರೆ. ಅವರ ಸಿಲಬಸ್ ಬಹುತೇಕ ಡಿಸೆಂಬರ್ಗೆ ಮುಗಿಯುತ್ತದೆ. ಅವರಲ್ಲಿ ಶೇಕಡಾ 20 ವಿದ್ಯಾರ್ಥಿಗಳು ಮಾತ್ರ ಮುಂದಿನ ವರ್ಷ ಕೂಡಾ ತಮ್ಮ ವಿದ್ಯಾಭ್ಯಾಸವನ್ನು ಇಲ್ಲೇ ಮುಂದುವರೆಸಲು ಬಯಸುತ್ತಾರೆ. ಈ ವಿದ್ಯಾರ್ಥಿಗಳು ಹೊರಗಿನವರೊಂದಿಗೆ ಹೆಚ್ಚು ಸಂಪರ್ಕದಲ್ಲಿರುವುದಿಲ್ಲ. ಇಡೀ ದಿನ ಓದುವುದರಲ್ಲೇ ಅವರು ಕಾಲ ಕಳೆಯುತ್ತಾರೆ. ಇಂತವರಿಗೆ ಸ್ಥಳೀಯರು ಹಾಗೂ ಇತರ ವಿದ್ಯಾರ್ಥಿಗಳೇ ಅಗತ್ಯ ಸಹಾಯ ಮಾಡುತ್ತಾರೆ.
ಅಂಕಿ ಅಂಶಗಳ ಪ್ರಕಾರ
- ಕೋಟಾದಲ್ಲಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಲು 12 ಪ್ರಮುಖ, 20 ಸಣ್ಣ ಕೋಚಿಂಗ್ ಸೆಂಟರ್ಗಳಿವೆ.
- ದೇಶದ ವಿವಿಧೆಡೆಯಿಂದ ಪ್ರತಿ ವರ್ಷ ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಗೆ ಬರುತ್ತಾರೆ.
- ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಪೇಯಿಂಗ್ ಗೆಸ್ಟ್ ಅಥವಾ ಹೋಟೆಲ್ಗಳಲ್ಲಿ ಉಳಿದುಕೊಳ್ಳುತ್ತಾರೆ.
- ಸುಮಾರು 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಸಿಂಗಲ್ ರೂಮ್ನಲ್ಲಿ ಉಳಿಯಲು ಬಯಸುತ್ತಾರೆ.
- ಕೋಟಾದಲ್ಲಿ ಸುಮಾರು 2000 ಹಾಸ್ಟೆಲ್ಗಳಿವೆ.
- ಸುಮಾರು 15 ಸಾವಿರ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಅಥವಾ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಾರೆ.