ಮೊರಾದಾಬಾದ್(ಉತ್ತರ ಪ್ರದೇಶ): ಕಾರಿನಲ್ಲಿ ಕುಳಿತು ಒಳಗಡೆಯಿಂದ ಲಾಕ್ ಮಾಡಿಕೊಂಡ ಪರಿಣಾಮ ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ದುರಂತ ನಡೆದಿದೆ.
ಮುಂಧ ಪಾಂಡೆ ಪೊಲೀಸ್ ಠಾಣೆ ವ್ಯಾಪ್ತಿಯ ವೀರ್ಪುರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ನಾಲ್ಕು ಮಕ್ಕಳು ಕಾರಿನಲ್ಲಿ ಕುಳಿತು ಆಕಸ್ಮಿಕವಾಗಿ ಲಾಕ್ ಮಾಡಿಕೊಂಡಿದ್ದಾರೆ. ಅವರಲ್ಲಿ ಇಬ್ಬರು ಆಮ್ಲಜನಕ ಕೊರತೆಯಿಂದ ಉಸಿರಾಡಲಾಗದೆ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳ ಕುಟುಂಬವು ಕಳೆದ ಭಾನುವಾರಷ್ಟೇ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿತ್ತು. ಸೋಮವಾರ ಮಧ್ಯಾಹ್ನ ಕಾರಿನೊಳಗೆ ಕುಳಿತುಕೊಳ್ಳಲು ಯತ್ನಿಸಿದ ಮಕ್ಕಳು ಅನ್ಲಾಕ್ ಮಾಡಿ ಒಳಹೋಗಿದ್ದಾರೆ. ಈ ವೇಳೆ ಕಾರು ಒಳಗಡೆಯಿಂದ ಲಾಕ್ ಆಗಿದ್ದು, ಮಕ್ಕಳಿಗೆ ಹೊರಗೆ ಬರಲು ಸಾಧ್ಯವಾಗಿಲ್ಲ. ಗಂಟೆಗಳೇ ಕಳೆದರೂ ಮಕ್ಕಳು ಕಾಣದಿದ್ದಾಗ ಕುಟುಂಬಸ್ಥರು ಅವರನ್ನು ಹುಡುಕತೊಡಗಿದ್ದರು. ಈ ವೇಳೆ ಮಕ್ಕಳು ಕಾರಿನೊಳಗಿರುವುದು ಖಚಿತಪಟ್ಟಿದೆ. ಅಸ್ವಸ್ಥಗೊಂಡ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಇಬ್ಬರು ಅದಾಗಲೇ ಮೃತಪಟ್ಟಿದ್ದರು.
ಮೊಹಮ್ಮದ್ ಅಲ್ತಾಫ್ (5), ಅಬ್ಷರ್ ರಾಝಾ (7) ಸಾವನ್ನಪ್ಪಿದ್ದು, ಮೊಹಮ್ಮದ್ ಅಫ್ತಾಬ್ (6) ಹಾಗೂ ಮೊಹಮ್ಮದ್ ಅಲ್ಫೈಜ್ (4) ಸ್ಥಿತಿ ಗಂಭೀರವಾಗಿದೆ.