ನವದೆಹಲಿ: ಕಳೆದ ಆರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಇಂದು ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿದ್ದಾರೆ. ಇಂದೇ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಯಲ್ಲಿ ಕಮಲ ಮುಡಿದಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಆಗಿದ್ದ ಅವರು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಪಕ್ಷದಲ್ಲಿನ ಸಿದ್ಧಾಂತ ಹಾಗೂ ನಿಜಾಂಶ ವಿಭಿನ್ನವಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ಸಾರ್ವಜನಿಕರು ಹಾಗೂ ಪಕ್ಷದ ಮುಖಂಡರ ಜತೆ ಯಾವುದೇ ರೀತಿಯ ಹೊಂದಾಣಿಕೆ ಇಲ್ಲ ಎಂದು ಹೇಳಿರುವ ಖುಷ್ಬೂ, ಇಲ್ಲಿಯವರೆಗೆ ಪಕ್ಷದಲ್ಲಿ ನಿಷ್ಠಾವಂತೆಯಾಗಿ ಕೆಲಸ ಮಾಡಿದ್ದೇನೆ. ಆದರೆ, ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಬಯಸಿರುವ ನನ್ನ ಜನರಿಂದ ದೂರ ತಳ್ಳಲಾಗುತ್ತಿದೆ ಮತ್ತು ನಿಗ್ರಹಿಸಲಾಗುತ್ತಿದೆ. ಪಕ್ಷದಲ್ಲಿ ಉನ್ನತ ಮಟ್ಟದಲ್ಲಿರುವ ಕೆಲ ಮುಖಂಡರು ವಾಸ್ತವತೆ ಅರೆತುಕೊಳ್ಳದೇ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸುತ್ತಿಲ್ಲ ಎಂದಿದ್ದಾರೆ.
ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಉಪಸ್ಥಿತಿಯಲ್ಲಿ 50 ವರ್ಷದ ನಟಿ, ರಾಜಕಾರಣಿ ಖುಷ್ಬೂ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಕಮಲ ಮುಡಿದ ಬಳಿಕ ಮಾತನಾಡಿ, ದೇಶ ಅಭಿವೃದ್ಧಿ ಕಾಣಬೇಕಾದರೆ ಪ್ರಧಾನಿ ನರೇಂದ್ರ ಮೋದಿಯಂತಹ ಪ್ರಧಾನಿಯವರ ಅವಶ್ಯಕತೆ ಇದೆ. ಅವರು ದೇಶವನ್ನ ಸರಿಯಾದ ದಿಕ್ಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಪಕ್ಷ ನೀಡುವ ಎಲ್ಲ ಜವಾಬ್ದಾರಿ ನಿರ್ವಹಿಸಲು ಸಿದ್ಧನಾಗಿರುವೆ ಎಂದಿದ್ದಾರೆ. 2014ರಲ್ಲಿ ಕಾಂಗ್ರೆಸ್ ಸೇರಿಕೊಳ್ಳುವುದಕ್ಕೂ ಮೊದಲು ನಟಿ ಡಿಎಂಕೆ ಪಕ್ಷ ಸೇರಿಕೊಂಡಿದ್ದರು.
2021ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ ಖುಷ್ಬೂ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಮಾಜಿ ಐಎಎಸ್ ಅಧಿಕಾರಿ ಅಣ್ಣಾಮಲೈ ಕೂಡ ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿದ್ದಾರೆ. ಅವರಿಗೆ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.