ತಿರುವನಂತಪುರಂ: ಕೊರೊನಾ ಸೋಂಕು ಇಲ್ಲದ ರೋಗಿಗಳಿಗಾಗಿ ಕೇರಳ ಸರ್ಕಾರ ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದರಿಂದಾಗಿ ಸಾಮಾನ್ಯ ರೋಗಿಗಳು ವೈದ್ಯರೊಂದಿಗೆ ನೇರ ಸಂಪರ್ಕ ಹೊಂದುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ಇದರಿಂದಾಗಿ ಕೊರೊನಾ ಸೋಂಕು ಹರಡುವುದನ್ನು ಕೂಡಾ ನಿಯಂತ್ರಿಸಬಹುದಾಗಿದ್ದು, ಇದೇ ವಾರದಲ್ಲಿ ಸಮಗ್ರ ಟೆಲಿಮೆಡಿಸಿನ್ ಅಪ್ಲಿಕೇಷನ್ ಅನ್ನು ಲಾಂಚ್ ಮಾಡಲಿದೆ. ಈ ಅಪ್ಲಿಕೇಷನ್ ಅನ್ನು ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಅಭಿವೃದ್ಧಿಪಡಿಸಿದೆ.
ಟೆಲಿಮೆಡಿಸಿನ್ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳ್ಳಲಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಭರವಸೆ ವ್ಯಕ್ತಪಡಿಸಿದ್ದು, ಇದು ಸಾಮಾನ್ಯ ರೋಗಿಗಳನ್ನು ಕೊರೊನಾ ರೋಗಿಗಳ ಜೊತೆ ಸಂಪರ್ಕದಿಂದ ತಪ್ಪಿಸಲು ಹಾಗೂ ವೃದ್ಧರು ಹಾಗೂ ಅಶಕ್ತರು ಕೊರೊನಾ ವೇಳೆ ಹೊರಗಡೆ ಹೋಗದಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಉಪಯೋಗ ಆಗಲಿದೆ ಎಂದಿದ್ದಾರೆ.
ಯೋಜನಾ ಮಂಡಳಿಯ ಸದಸ್ಯ ಡಾ. ಬಿ. ಇಕ್ಬಾಲ್ ಮಾತನಾಡಿ, ಕೊರೊನಾ ಸೋಂಕಿನ ಕಾರಣದಿಂದಾಗಿ ಸಾಕಷ್ಟು ಕೊರೊನಾ ಸೋಂಕು ಇಲ್ಲದ ರೋಗಿಗಳು ತೊಂದರೆಗೀಡಾಗಿದ್ದರು. ಅವರಿಗೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಕೇರಳದಲ್ಲಿ ಕೊರೊನಾ ಹರಡದಂತೆ ತಡೆಯಲು ಈ ಸೇವೆ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಇ- ಸಂಜೀವಿನಿ ಸೇವೆಯ ಉಸ್ತುವಾರಿ ವಹಿಸಿಕೊಂಡಿರುವ ಕೇರಳ ರಾಜ್ಯದ ಕೋವಿಡ್ ನೋಡಲ್ ಅಧಿಕಾರಿ ಡಾ.ದಿವ್ಯಾ. ವಿ.ಎಸ್. ಈ ಸೇವೆಯನ್ನು ಆರಂಭಿಸಲು ಉತ್ತಮ ಪ್ರತಿಕ್ರಿಯೆ ದೊರೆತಿದೆ. ಒಂದು ತಿಂಗಳ ಅವಧಿಯಲ್ಲಿ ಟೆಲಿಮೆಡಿಸಿನ್ ಎಲ್ಲಾ ಜಿಲ್ಲೆಗಳಿಗೂ ತಲುಪಲಿದೆ. ಈಗಾಗಲೇ ವೈದ್ಯರಿಗೆ ತರಬೇತಿ ಶುರುವಾಗಿದೆ ಎಂದು ಮಾಹಿತಿ ನೀಡಿದ್ದಾರೆ.