ಕೊಚ್ಚಿ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಅಮಾನತುಗೊಂಡಿರುವ ಹಿರಿಯ ಐಎಎಸ್ ಅಧಿಕಾರಿ ಎಂ ಶಿವಶಂಕರ್ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇಂದು ಮತ್ತೆ ವಿಚಾರಣೆಗೊಳಪಡಿಸಿದೆ.
ಈ ಹಿಂದೆ ಜುಲೈ 23 ರಂದು 5 ಗಂಟೆಗಳ ಕಾಲ ಹಾಗೂ ಸೋಮವಾರ 9 ಗಂಟೆಗಳ ಕಾಲ ಶಿವಶಂಕರ್ ಅವರನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಕಳೆದೊಂದು ವಾರದಲ್ಲಿ ಮೂರು ಬಾರಿ ಶಿವಶಂಕರ್ ವಿಚಾರಣೆಗೊಳಪಟ್ಟಂತಾಗಿದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿದ್ದ ಶಿವಶಂಕರ್ ಅವರನ್ನು ಕೇರಳ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಅಮಾನತುಗೊಳಿಸಲಾಗಿತ್ತು.
ಯುಎಇ ಕಾನ್ಸುಲೇಟ್‌ನ ಮಾಜಿ ಉದ್ಯೋಗಿ ಪಿ ಎಸ್ ಸರಿತ್ ಎಂಬವರ ಬಳಿ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಸುಮಾರು 15 ಕೋಟಿ ರೂಪಾಯಿ ಮೌಲ್ಯದ 30 ಕೆ.ಜಿ. ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜುಲೈ 5ರಂದು ವಶಪಡಿಸಿಕೊಂಡಿದ್ದರು. ಬಳಿಕ ಕಳ್ಳಸಾಗಣೆಯ ಸಂಪರ್ಕ ಜಾಲ ಹುಡುಕುತ್ತಾ ಹೋದಾಗ ಯುಎಇ ಕಾನ್ಸುಲೇಟ್‌ನ ಮಾಜಿ ಉದ್ಯೋಗಿ ಮತ್ತು ಐಟಿ ಇಲಾಖೆಯ ಉದ್ಯೋಗಿಯಾಗಿದ್ದ ಸ್ವಪ್ನಾ ಸುರೇಶ್ ಪ್ರಕರಣದ ಪ್ರಮುಖ ಆರೋಪಿ ಎಂಬುದು ಬಯಲಾಗಿತ್ತು.