ನವದೆಹಲಿ: 2020ರ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದ (PAI) ಪ್ರಕಾರ ದೇಶದ ಅತ್ಯುತ್ತಮ ಆಡಳಿತ ಹೊಂದಿರುವ ರಾಜ್ಯ ಕೇರಳವಾಗಿದ್ದು, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ನಂತರದ ಸ್ಥಾನಗಳಲ್ಲಿವೆ.
ಬೆಂಗಳೂರಿನಲ್ಲಿರುವ ಸಾರ್ವಜನಿಕ ವ್ಯವಹಾರಗಳ ಕೇಂದ್ರ (PAC) ಬಿಡುಗಡೆ ಮಾಡಿರುವ ವಾರ್ಷಿಕ ವರದಿ ಇದಾಗಿದೆ. ಪಿಎಸಿ, ಇದು ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತುರಿರಂಗನ್ ಅವರ ನೇತೃತ್ವದ ಸಂಸ್ಥೆಯಾಗಿದೆ. ರಾಜ್ಯಗಳ ಆಡಳಿತದ ಕಾರ್ಯಕ್ಷಮತೆ, ಸುಸ್ಥಿರ ಅಭಿವೃದ್ಧಿಯ ಆಧಾರದ ಮೇಲೆ ಈ ಸ್ಥಾನಗಳನ್ನು ನೀಡಲಾಗಿದೆ.
ದಕ್ಷಿಣ ಭಾರತದ ಕೇರಳ (PAI 1.388 ಅಂಕ), ತಮಿಳುನಾಡು (0.912), ಆಂಧ್ರಪ್ರದೇಶ (0.531) ಮತ್ತು ಕರ್ನಾಟಕ (0.468) ಮೊದಲ ನಾಲ್ಕು ಶ್ರೇಯಾಂಕಗಳಲ್ಲಿ ಸ್ಥಾನ ಪಡೆದಿವೆ.
ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ:
-1.461 ಅಂಕಗಳೊಂದಿಗೆ ಉತ್ತರ ಪ್ರದೇಶ ಈ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಒಡಿಶಾ (-1.201) ಮತ್ತು ಬಿಹಾರ ( -1.158) ಕೂಡ ಕೊನೆಯ ಎರಡನೇ, ಮೂರನೇ ಸ್ಥಾನಗಳಲ್ಲಿವೆ. ಋಣಾತ್ಮಕ ಅಂಕಗಳನ್ನು ಗಳಿಸಿದ ರಾಜ್ಯಗಳಲ್ಲಿ ಮಣಿಪುರ (-0.363), ದೆಹಲಿ (-0.289) ಮತ್ತು ಉತ್ತರಾಖಂಡ್ (-0.277) ಸಹ ಸೇರಿವೆ ಎಂದು ಪಿಎಸಿ ವರದಿಯಲ್ಲಿ ತಿಳಿಸಲಾಗಿದೆ.
ಅತಿ ಸಣ್ಣ ರಾಜ್ಯಗಳ ವಿಭಾಗದಲ್ಲಿ ಗೋವಾ 1.745 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಮೇಘಾಲಯ (0.797) ಮತ್ತು ಹಿಮಾಚಲ ಪ್ರದೇಶ (0.725) ನಂತರದ ಸ್ಥಾನದಲ್ಲಿವೆ.
ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ 1.05 ಪಿಎಐ ಅಂಕಗಳೊಂದಿಗೆ ಚಂಡೀಗಢ, ಪುದುಚೇರಿ (0.52) ಮತ್ತು ಲಕ್ಷದ್ವೀಪ (0.003) ನಂತರದ ಸ್ಥಾನಗಳಲ್ಲಿವೆ. ದಾದರ್ ಮತ್ತು ನಗರ ಹವೇಲಿ (-0.69), ಜಮ್ಮು ಮತ್ತು ಕಾಶ್ಮೀರ (-0.50) ಮತ್ತು ಅಂಡಮಾನ್ -ನಿಕೋಬಾರ್ (-0.30) ಕೊನೆಯ ರ್ಯಾಂಕ್ಗಳನ್ನು ಪಡೆದಿದೆ.