ತಿರುವನಂತಪುರಂ: ಕೊರೊನಾ ಯುದ್ಧವನ್ನು ಚಾಣಾಕ್ಷತನದಿಂದ ನಿರ್ವಹಣೆ ಮಾಡುವಲ್ಲಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದ ಕೇರಳ ಮತ್ತೊಂದು ಸಾಧನೆ ಮಾಡಿದೆ. ಅದೇ ಶಿಶು ಮರಣ ಪ್ರಮಾಣದಲ್ಲಿ ಇಳಿಕೆ.
ಹೌದು, ಕೇರಳ ತನ್ನ ಶಿಶು ಮರಣ ಪ್ರಮಾಣವನ್ನು (ಐಎಂಆರ್) 10ರಿಂದ 7ಕ್ಕೆ ಇಳಿಸಿಕೊಂಡಿದೆ. ಅಂದರೆ ಪ್ರತೀ 1000 ಜನನಗಳಿಗೆ 10 ಮಕ್ಕಳು ಹುಟ್ಟಿದಾಕ್ಷಣ ಮರಣ ಹೊಂದುತ್ತಿದ್ದವು. ವಿಶ್ವಸಂಸ್ಥೆಯು 2020ಕ್ಕೆ ಈ ಪ್ರಮಾಣದಲ್ಲಿ 8ರ ಗುರಿ ಹೊಂದಿತ್ತು. ಆದರೆ ಕೇರಳ ಒಂದು ಹೆಜ್ಜೆ ಮುಂದೆ ಇದೆ. ಇಲ್ಲಿ ಮರಣ ಸಂಖ್ಯೆ 10ಕ್ಕಿದ್ದಿದ್ದು ಈಗ 7ಕ್ಕೆ ಇಳಿದಿದೆ ಎಂದು ಎಸ್‌ಆರ್‌ಎಸ್ (ಸ್ಯಾಂಪಲ್ ರಿಜಿಸ್ಟ್ರೇಶನ್ ಸಿಸ್ಟಮ್) ಬುಲೆಟಿನ್ನಲ್ಲಿ ತಿಳಿಸಿದೆ.
ಎಲ್ಲಾ ತಾಯಂದಿರಿಗೆ ಅಮ್ಮಂದಿರ ದಿನದ ಶುಭಾಶಯಗಳನ್ನು ತಿಳಿಸುವ ಜೊತೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಶನಿವಾರ, ಐಎಂಆರ್ ರಾಷ್ಟ್ರೀಯ ಸರಾಸರಿ 1,000 ಜನನಗಳಿಗೆ 32 ಆಗಿದ್ದರೆ, ರಾಜ್ಯವು ಕೇವಲ 7 ಮರಣ ಪ್ರಮಾಣ ಹೊಂದಿದೆ ಎಂದು ಹೇಳಿದರು.
ತಾಯಂದಿರಿಗೆ ದೊಡ್ಡ ಸಂತೋಷವೆಂದರೆ ಅವರ ಮಕ್ಕಳು. ನಾವು ತಾಯಂದಿರ ದಿನವನ್ನು ಆಚರಿಸುತ್ತಿರುವಾಗ ರಾಜ್ಯವು ಐಎಂಆರ್ಅನ್ನು ಹತ್ತರಿಂದ ಏಳಕ್ಕೆ ಇಳಿಸಿದೆ ಎಂಬ ಒಳ್ಳೆಯ ಸುದ್ದಿ ನಮ್ಮಲ್ಲಿದೆ. ಇದು ನಮಗೆ ಒಂದು ದೊಡ್ಡ ಸಾಧನೆಯಾಗಿದೆ ಎಂದಿದ್ದಾರೆ.