ತೇಜ್ಪುರ (ಅಸ್ಸಾಂ): ಕೊರೊನಾ ನಂತರದ ಅನ್ಲಾಕ್ ಪ್ರಕ್ರಿಯೆ ದೇಶಾದ್ಯಂತ ಜಾರಿಯಲ್ಲಿದ್ದು, ಒಂದೊಂದೇ ಪ್ರವಾಸಿ ತಾಣಗಳು ಸಾರ್ವಜನಿಕರಿಗೆ ಮುಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಸ್ಸಾಂನ ಕಾಜಿರಂಗಾ ನ್ಯಾಷನಲ್ ಪಾರ್ಕ್ ಪ್ರವಾಸಿಗರಿಗೆ ಮುಕ್ತವಾಗಲು ದಿನಾಂಕ ನಿಗದಿಗೊಂಡಿದೆ.
ಅಕ್ಟೋಬರ್ 21ರಂದು ಕಾಜಿರಂಗಾ ನ್ಯಾಷನಲ್ ಪಾರ್ಕ್ ತೆರೆಯಲಿದ್ದು, ಇದೇ ದಿನ ವಿಶ್ವ ಪ್ರಸಿದ್ಧ ಏಷಿಯನ್ ಖಡ್ಗಮೃಗಗಳ ಪ್ರವಾಸಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹಾಗೂ ಅರಣ್ಯ ಖಾತೆ ಸಚಿವ ಪರಿಮಲ್ ಶುಕ್ಲಾ ವೈದ್ಯ ಚಾಲನೆ ನೀಡಲಿದ್ದಾರೆ.
ಅಕ್ಟೋಬರ್ 5ರಂದೇ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವನ್ನು ಆದರೆ ಪ್ರವಾಹದ ಕಾರಣದಿಂದಾಗಿ ಸಾಕಷ್ಟು ಹಾನಿಯಾಗಿದ್ದರಿಂದ ಉದ್ಯಾನವನವನ್ನು ತೆರೆಯಲು ಸಾಧ್ಯವಾಗಿರಲಿಲ್ಲ. ಈಗ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಕಾರಣದಿಂದ ಉದ್ಯಾನವನವನ್ನು ತೆರೆಯಲಾಗುತ್ತದೆ. ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಕಾಜಿರಂಗಾ ನ್ಯಾಷನಲ್ ಪಾರ್ಕ್ನಲ್ಲಿ ಇದೇ ವರ್ಷದ ಫೆಬ್ರವರಿಯಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಮಾರ್ಚ್ ಮಧ್ಯಭಾಗದಲ್ಲಿ ಸಂಪೂರ್ಣವಾಗಿ ಮುಚ್ಚಿದ್ದು, ಈಗ ಸುಮಾರು 7 ತಿಂಗಳ ನಂತರ ಪ್ರವಾಸಿಗರಿಗೆ ಮುಕ್ತವಾಗಲಿದೆ.
ಈ ರಾಷ್ಟ್ರೀಯ ಉದ್ಯಾನವನಕ್ಕೆ ಈ ವರ್ಷ ಹಿಂದಿನ ವರ್ಷಕ್ಕಿಂತ ಕಡಿಮೆ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೊರೊನಾ ಕಾರಣದಿಂದ ಈ ಬಾರಿ ಅಸ್ಸಾಂ ಪ್ರವಾಸೋದ್ಯಮ ಇಲಾಖೆಗೆ ಸಾಕಷ್ಟು ಆದಾಯ ನಷ್ಟವಾಗಿದೆ. ಈ ಬಾರಿ ಕೇವಲ 98 ಲಕ್ಷ ಆದಾಯ ಬಂದಿದೆ. 2019ರಲ್ಲಿ 1.22 ಕೋಟಿ ರೂಪಾಯಿ ಆದಾಯ ಬಂದಿದೆ.