ನವದೆಹಲಿ: ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದ ಆರೋಪದ ಮೇಲೆ ಈ ವರ್ಷದ ಆರಂಭದಲ್ಲಿ ಬಂಧನಕ್ಕೊಳಗಾದ ಕಾಶ್ಮೀರಿ ಮಹಿಳೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಶದಲ್ಲಿದ್ದಾಗ ಕೋವಿಡ್ -19 ಸೋಂಕಿಗೆ ತುತ್ತಾಗಿದ್ದಾಳೆ.
ಸೋಂಕಿತ ಆರೋಪಿ, ಹೀನಾ ಬಶೀರ್ ಬೇಗ್ ಅವರನ್ನು ಲೋಕ ನಾಯಕ್ ಜೈ ಪ್ರಕಾಶ್ ಆಸ್ಪತ್ರೆಗೆ ತಕ್ಷಣ ದಾಖಲು ಮಾಡುವಂತೆ ನ್ಯಾಯಾಧೀಶರು ಎನ್ಐಎಗೆ ನಿರ್ದೇಶನ ನೀಡಿದ್ದಾರೆ. ಈ ಪ್ರಕರಣದಲ್ಲಿ ಆಕೆಯ ಪತಿ ಜಹನ್‌ಜೈಬ್ ಸಮಿ ಮತ್ತು ಇನ್ನೊಬ್ಬ ಆರೋಪಿ ಅಬ್ದುಲ್ ಬಸಿತ್ನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದನ್ನು ನಿಭಾಯಿಸಲು ನವದೆಹಲಿ ಸರ್ಕಾರ ಹೆಣಗಾಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸಾ ಸೌಲಭ್ಯಗಳ ಕೊರತೆಯಿದೆ ಎಂದು ಆಕೆಯ ಪರ ವಕೀಲ ಎಂ.ಎಸ್. ಖಾನ್ ಅವರು ಎರಡು ತಿಂಗಳ ಕಾಲ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಐಸಿಸ್ ಉಗ್ರ ಸಂಘಟನೆ ಸಿದ್ಧಾಂತವನ್ನು ಉತ್ತೇಜಿಸಿದ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳನ್ನು ಪ್ರಚೋದಿಸಿದ ಆರೋಪದಡಿ ಬಂಧಿಸಲಾಗಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಜೂನ್ 6 ರಂದು ಆರೋಪಿಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಆರೋಪಿಗಳಾದ ಜಹನ್‌ಜೈಬ್ ಸಮಿ ಮತ್ತು ಮೊಹಮ್ಮದ್ ಅಬ್ದುಲ್ಲಾ ಬಸಿತ್ ಅವರ ವರದಿ ನೆಗೆಟಿವ್ ಬಂದಿದೆ. ಆದರೆ, ಹೀನಾ ಬಶೀರ್ ಬೇಗ್ ಅವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ.