ಬೆಂಗಳೂರು : ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ವಿಸ್ಟ್ರಾನ್ ಕಾರ್ಖಾನೆ ಆವರಣದಲ್ಲಿ ನಡೆದ ಘಟನೆ ಕುರಿತಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಗಮನಕ್ಕೆ ತಂದಿದೆ. ಕೇಂದ್ರ ಸರ್ಕಾರ ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ.
ತನಿಖೆ ಶೀಘ್ರ ಫೂರ್ಣಗೊಳಿಸಲು ಕೇಂದ್ರ ಸೂಚನೆ:
ಕೇಂದ್ರದ ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಯ (ಡಿಪಿಐಐಟಿ) ಕಾರ್ಯದರ್ಶಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಘಟನೆಯ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.
ಮೊದಲು ತಪ್ಪಿತಸ್ಥರನ್ನು ಗುರುತಿಸಿ, ಅಲ್ಲದೆ ನೌಕಕರ ವೇತನ ಸಮಸ್ಯೆ ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಿ ಎಂದು ಸಲಹೆ ನೀಡಿದ್ದಾರೆ. ಹೂಡಿಕೆದಾರರ ಮನೋಭಾವನೆಗೆ ಧಕ್ಕೆ ಬರದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.
ವಿಸ್ಟ್ರಾನ್ ಕಂಪನಿಗೂ, ನೌಕರರಿಗೂ ರಾಜ್ಯ ಸರ್ಕಾರ ಅಭಯ:
ಇದೇ ವೇಳೆ, ರಾಜ್ಯ ಸರ್ಕಾರ ಈ ಕುರಿತು ಹೇಳಿಕೆಯೊಂದನ್ನು ನೀಡಿದೆ. ''ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ವಿಸ್ಟ್ರಾನ್ ಕಾರ್ಖಾನೆ ಆವರಣದಲ್ಲಿ ನಡೆದ ಘಟನೆ ಬಗ್ಗೆ ಸರ್ಕಾರ ತೀವ್ರವಾಗಿ ನೊಂದಿದೆ. ಈ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಪೊಲೀಸ್ ತನಿಖೆ ನಡೆಯುತ್ತಿದೆ ಮತ್ತು ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದೆ.
ಇದನ್ನೂ ಓದಿ: ವಿಸ್ಟ್ರಾನ್ ಕಂಪನಿಯಲ್ಲಿ ದಾಂಧಲೆ: ನೂರಾರು ಕೋಟಿ ರೂಪಾಯಿ ನಷ್ಟ, 11,500 ಕಾರ್ಮಿಕರು ಬೀದಿ ಪಾಲು
ಕರ್ನಾಟಕ ಯಾವಾಗಲೂ ಶಾಂತಿಯುತ ರಾಜ್ಯವಾಗಿದೆ. ವಿದೇಶಿ ಹೂಡಿಕೆಗಳನ್ನು ಸ್ವಾಗತಿಸುವಲ್ಲಿ ಮುಂಚೂಣಿಯಲ್ಲಿದೆ. ಉದ್ಯಮ, ವ್ಯಾಪಾರ ಮತ್ತು ವ್ಯವಹಾರದ ಬೆಳವಣಿಗೆಗೆ ರಾಜ್ಯ ಬದ್ಧವಾಗಿದೆ.
ಕಾರ್ಖಾನೆಯನ್ನು ಪುನಃ ಪ್ರಾರಂಭಿಸುವ ಬಗ್ಗೆ ನಾವು ವಿಸ್ಟ್ರಾನ್ ಆಡಳಿತ ಮಂಡಳಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ಕಾರ್ಮಿಕರ ನಿಜವಾದ ಕುಂದುಕೊರತೆಗಳನ್ನು ಪರಿಹರಿಸುವಲ್ಲೂ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ಘಟಕದ ರಕ್ಷಣೆಯ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಹೀಗಾಗಿ ಪೂರ್ಣ ಪ್ರಮಾಣದ ಸೆಕ್ಯೂರಿಟಿಯನ್ನು ನಾವು ನೀಡುತ್ತೇವೆ.'' ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.