ಕರ್ನಾಲ್: ಇರಾನ್ ಹಾಗೂ ಅಮೆರಿಕದ ನಡುವಿನ ವೈಷಮ್ಯ ಹೆಚ್ಚಾಗುತ್ತಿದ್ದು ಇದು ಭಾರತ-ಇರಾನ್ ನಡುವಿನ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಇರಾನ್‌ಗೆ ಬಾಸುಮತಿ ಅಕ್ಕಿ ರಫ್ತು ಮಾಡುವುದನ್ನು ನಿಲ್ಲಿಸಲು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ನಿರ್ಧರಿಸಿದ್ದು, ಪರಿಸ್ಥಿತಿ ಸುಧಾರಿಸುವವರೆಗೂ ಯಾವುದೇ ರಫ್ತು ಇರುವುದಿಲ್ಲ ಎಂದು ತಿಳಿಸಿದೆ.
ಪುಸಾ ಬಾಸುಮತಿ 1,509, ಪುಸಾ ಬಾಸುಮತಿ 1,121 ಸೇರಿದಂತೆ ಭಾರತವು ಬಾಸುಮತಿ ಅಕ್ಕಿಗೆ ಅತಿದೊಡ್ಡ ಮಾರುಕಟ್ಟೆಯಾಗಿದೆ. ಹರಿಯಾಣದ ಬಾಸ್ಮತಿ ಅಕ್ಕಿಯನ್ನು ದೇಶದ ಅತಿದೊಡ್ಡ ಅಕ್ಕಿ ಕೇಂದ್ರವಾದ ಕರ್ನಾಲ್ ಮತ್ತು ಪಕ್ಕದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಕರ್ನಾಲ್ ಜಿಲ್ಲೆಯಲ್ಲೇ ಸುಮಾರು 35 ಅಕ್ಕಿ ರಫ್ತುದಾರರು ಇರಾನ್ ಮತ್ತು ಇತರ ದೇಶಗಳೊಂದಿಗೆ ವ್ಯಾಪಾರ ಮಾಡುತ್ತಾರೆ.
ಆದರೆ ಇರಾನ್ ಕಮಾಂಡರ್ ಹತ್ಯೆ ಬಳಿಕ ಇದೀಗ ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳುತ್ತಿದ್ದ ಇರಾನ್ ಬಾಕಿ ಪಾವತಿಸುವಲ್ಲಿ ವಿಳಂಬ ಮಾಡುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಮಾರು 500 ಕೋಟಿ ರೂ ಮೌಲ್ಯದ ಅಕ್ಕಿಯನ್ನು ಇರಾನ್‌ಗೆ ರಫ್ತು ಮಾಡಲಾಗಿದ್ದು, ಇರಾನ್ ಕೇವಲ 40% ರಷ್ಟು ಹಣ ಪಾವತಿಸಿದೆ. ಹೀಗಾಗಿ ಅಕ್ಕಿ ರಫ್ತುದಾರರು ತಮ್ಮ ಹಣ ಪಾವತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮುಂಗಡ ಪಾವತಿ ಅಥವಾ ಷರತ್ತುಬದ್ಧ ಸಾಲದ ಪತ್ರದ ಮೂಲಕ ಮಾತ್ರ ಅಕ್ಕಿ ರಫ್ತು ಮಾಡಲು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ನಿರ್ಧರಿದೆ.